ರೈತರಿಗೆ ತಂತ್ರಜ್ಞಾನ ನೀಡದಿದ್ದಲ್ಲಿ ಪ್ರಗತಿ ಅಸಾಧ್ಯ: ಹರೀಶ ಹಂದೆ

KannadaprabhaNewsNetwork |  
Published : May 02, 2024, 12:18 AM IST
ಕೋಲ್ಡ್ ಸ್ಟೋರೇಜ್ ಘಟಕ ಉದ್ಘಾಟಿಸಲಾಯಿತು  | Kannada Prabha

ಸಾರಾಂಶ

ದೇಶಕ್ಕೆ ಲಾಭವಾಗುವ ಕೆಲಸ ಎಲ್ಲೆಡೆ ಆಗಬೇಕು. ಒಂದು ಯೋಜನೆ ಇತರ ಯುವ ಶಕ್ತಿಯನ್ನೂ ಆಕರ್ಷಿಸುವಂತೆ ಆದಾಗ ಪ್ರಗತಿ ವೇಗ ಪಡೆಯಲಿದೆ ಎಂದು ಸೆಲ್ಕೋ ಸಂಸ್ಥಾಪಕ ಹರೀಶ ಹಂದೆ ತಿಳಿಸಿದರು.

ಶಿರಸಿ: ರೈತರಿಗೆ ತಂತ್ರಜ್ಞಾನ ಒದಗಿಸದೇ ಹೋದರೆ ಪ್ರಗತಿ ಸಾಧ್ಯವಿಲ್ಲ. ಉತ್ತರ ಕನ್ನಡದ‌ ಜಿಲ್ಲೆ ಉತ್ಪನ್ನ, ಮೌಲ್ಯ ವರ್ಧನೆಯಲ್ಲಿ ಗಣನೀಯವಾಗಿ ತೊಡಗಿಕೊಂಡರೆ ದೇಶಕ್ಕೆ ಮಾದರಿಯಾಗಲಿದೆ ಎಂದು‌ ಸೆಲ್ಕೋ‌ ಸಂಸ್ಥಾಪಕ, ಮ್ಯಾಗ್ಸೆಸ್ಸೆ ಪ್ರಶಸ್ತಿ‌ ಪುರಸ್ಕೃತ ಹರೀಶ ಹಂದೆ ತಿಳಿಸಿದರು.

ಬುಧವಾರ ತಾಲೂಕಿನ ಮಾವಿನಕೊಪ್ಪದಲ್ಲಿ ಸೆಲ್ಕೋ ಸೋಲಾರ್, ಸೆಲ್ಕೋ ಫೌಂಡೇಶನ್ ಸಹಕಾರದಲ್ಲಿ ಸೌರಶಕ್ತಿ ಆಧರಿತ ೨೦ ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್ ಘಟಕ ಉದ್ಘಾಟಿಸಿ‌ ಮಾತನಾಡಿದರು.

ದೇಶಕ್ಕೆ ಲಾಭವಾಗುವ ಕೆಲಸ ಎಲ್ಲೆಡೆ ಆಗಬೇಕು. ಒಂದು ಯೋಜನೆ ಇತರ ಯುವ ಶಕ್ತಿಯನ್ನೂ ಆಕರ್ಷಿಸುವಂತೆ ಆದಾಗ ಪ್ರಗತಿ ವೇಗ ಪಡೆಯಲಿದೆ ಎಂದರು.

ನಮ್ಮ‌ ಸಮಾಜ, ಮನೆಯಲ್ಲಿ‌ ಕೂಡ ಸವಾಲು, ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಸಂಶೋಧನೆಗೆ ಹಣ ಬೇಕು. ಅದಕ್ಕಾಗಿ ಬ್ಯಾಂಕಿಗೆ ಹೋಗಬೇಕಾದ ಸ್ಥಿತಿ ಇದೆ. ಹಿಂದೆ ಸಹಕಾರಿ ಆಂದೋಲನ ನಡೆದಿದ್ದರಿಂದ ಇಂದು ಸುಲಭವಾಗಿದೆ. ಮಾರುಕಟ್ಟೆ ಸಂಪರ್ಕ ಸಾಧಿಸಿ ಕೆಲಸ ಮಾಡಿದಾಗ ಭವಿಷ್ಯ ಒಳ್ಳೆಯದಾಗಲಿದೆ. ಸಣ್ಣ ಸಣ್ಣ ರೈತರಿಗೆ ಅನುಕೂಲ ಆಗಬೇಕು. ಅದಕ್ಕೋಸ್ಕರ ಸೆಲ್ಕೋ ಕೆಲಸ ಮಾಡುತ್ತಿದೆ. ಋಣಾತ್ಮಕ ಅಂಶಗಳನ್ನು ಆಲೋಚಿಸದೇ ಕೆಲಸ ಮಾಡಬೇಕು ಎಂದರು.

ಸೆಲ್ಕೋ ಸಂಸ್ಥೆಯ‌ ಮುಖ್ಯ ಕಾರ್ಯನಿರ್ವಾಹಕ ಮೋಹನ ಭಾಸ್ಕರ ಹೆಗಡೆ ಹೆರವಟ್ಟ, ಇಪ್ಪತ್ತು ಮೆಟ್ರಿಕ್ ‌ಟನ್ ಸೌರ ಶಕ್ತಿ ಆಧರಿತ ಕೋಲ್ಡ್ ಸ್ಟೋರೇಜ್ ರಾಜ್ಯದ ಮೊದಲಲ್ಲಿ ಒಂದು. ₹೨೨ ಲಕ್ಷ ಯೋಜನೆಯಲ್ಲಿ ಕುಟುಂಬದವರು ₹೭ ಲಕ್ಷ ಹಾಕಿದ್ದಾರೆ ಎಂದು ತಿಳಿಸಿದರು.

೭೮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಲಾರ್ ಘಟಕ, ೩೦೦ ಶಾಲೆಗಳಲ್ಲಿ ಡಿಜಿಟಲೀಕರಣಕ್ಕೆ ನೆರವಾಗಿದ್ದೇವೆ. ೧೭೦ಕ್ಕೂ ಅಧಿಕ ಜೀವನೋಪಾಯ ಉತ್ಪನ್ನಗಳಿಗೆ ನೆರವಾಗುತ್ತಿದ್ದೇವೆ ಎಂದರು.

ಡಬ್ಲ್ಯುಎಚ್‌ಒ ಪ್ರಮುಖ ನೆದರ್‌ಲ್ಯಾಂಡನ ಜಪರಿ ಪ್ರಿನ್ಸ್ ಮಾತನಾಡಿ, ಸೆಲ್ಕೋ‌ ಮೂಲಕ ಗ್ರಾಮೀಣ ಪ್ರಗತಿಗೆ ಅನುಕೂಲ ಆಗುವ ಕಾರ್ಯ ಮಾಡುತ್ತಿದ್ದೇವೆ. ಅನ್ವೇಷಣೆ, ಕ್ರಾಂತಿ, ಸುಸ್ಥಿರ ಇಂಧನದ ಬಳಕೆ ಹೆಚ್ಚಲಿ ಎಂದರು.

ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್‌ ಕೋಟೆಮನೆ, ಸೆಲ್ಕೋ ಸೋಲಾರ್ ಒಂದು ಕ್ರಾಂತಿ‌ ಮಾಡಿಕೊಡುತ್ತಿದೆ. ರಾಗಿ‌ ಮಾಲ್ಟ್‌ನಿಂದ ಅನೇಕ ವಸ್ತುಗಳ ಮೌಲ್ಯವರ್ಧನೆ ಆಗಬೇಕು. ಇಂದು ಹತ್ತು ಕೋಟಿ ಮೌಲ್ಯದ ಹಲಸು ನಾಶವಾಗುತ್ತಿದೆ. ಉತ್ತರ ಕನ್ನಡದ ಋತುಮಾನ ಬೆಳೆಗಳ ಸಂರಕ್ಷಣೆ ಕಾರ್ಯ ಆಗಬೇಕು. ಕೋಲ್ಡ್‌ ಸ್ಟೋರೇಜ್, ಸೋಲಾರ್ ಡ್ರಾಯರ್ ಬೇಕು. ಸಣ್ಣ ಸಣ್ಣ ಘಟಕಗಳ ಬಗ್ಗೆ ಆಲೋಚಿಸಬೇಕಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ‌ ಮಾವಿನಕೊಪ್ಪದ ವಿಕಾಸ ಹೆಗಡೆ, ನೈಸರ್ಗಿಕ ಸಂಪತ್ತು ಹಾಳಾಗದಂತೆ‌ ನೋಡಿಕೊಳ್ಳಲು ಶೀತಲೀಕರಣ ಘಟಕ ನೆರವಾಗುತ್ತದೆ. ಲಕ್ಷಾಂತರ ರುಪಾಯಿ ನಷ್ಟ ಆಗುವುದನ್ನು ತಡೆಗಟ್ಟಬಹುದು ಎಂದರು‌.

ಮಹತೀ ಎಂಟರ್‌ಪ್ರೈಸಸ್‌ನ ನಾಗರಾಜ್ ಜೋಶಿ, ಚಂದ್ರಶೇಖರ ಹೆಗಡೆ, ಭುವನೇಶ್ವರಿ ಜೋಶಿ, ಮಂಜುನಾಥ ಭಾಗ್ವತ್, ಸುಬ್ರಾಯ ಹೆಗಡೆ, ನಾರಾಯಣ ಹೆಗಡೆ ಇದ್ದರು.ಉತ್ಪನ್ನ ನಷ್ಟ: ಕೋಲ್ಡ್‌ ಸ್ಟೋರೇಜ್ ಕೊರತೆಯಿಂದ ಶೇ. ೩೦ರಷ್ಟು ಉತ್ಪನ್ನ ನಷ್ಟವಾಗುತ್ತಿದೆ. ಸಣ್ಣ ಸಣ್ಣ ಘಟಕ ಇನ್ನಷ್ಟು ನೆರವಾಗಲಿದೆ. ಜಿಲ್ಲೆಯ ಅಗತ್ಯತೆಯ ಪ್ರಸ್ತಾಪವನೆಯನ್ನು ಸಲ್ಲಿಸುತ್ತೇವೆ. ಒಟ್ಟಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದು ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ತಿಳಿಸಿದರು.

ಗ್ರಾಹಕರ ಕಾಳಜಿ: ಸೆಲ್ಕೋ ಗ್ರಾಹಕರಿಗೆ ನಷ್ಟ ಆಗದಂತೆ ಕಾಳಜಿ ವಹಿಸುತ್ತೇವೆ. ಇಲ್ಲಿ ಆಗುವ ಒಂದು ಪ್ರಯೋಗ ದೇಶದ ಇನ್ನಾವುದೋ ಒಂದು ಭಾಗಕ್ಕೆ ಅನುಕೂಲ ಆಗಬಹುದು. ರಾಜ್ಯದ ಸೌರಚಾಲಿತ ೨೦ ಮೆಟ್ರಿಕ್ ಟನ್ ಕೋಲ್ಡ್‌ ಸ್ಟೋರೇಜ್ ಮೊದಲನೆಯ ಸಾಲಿನಲ್ಲಿದೆ ಎಂದು ಸೆಲ್ಕೋ ಸಿಇಒ ಮೋಹನ ಭಾಸ್ಕರ ಹೆಗಡೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ