ಕಾರ್ಮಿಕರ ಶ್ರಮದಿಂದ ದೇಶದ ಪ್ರಗತಿ ಸಾಧ್ಯ: ವಿ.ಸಿ.ಉಮಾಶಂಕರ್

KannadaprabhaNewsNetwork | Published : May 2, 2024 12:17 AM

ಸಾರಾಂಶ

ಕೈಗಾರಿಕೆಗಳಲ್ಲಿ ದುಡಿಯುವವರು, ಕೃಷಿ ಕೂಲಿಕಾರರು, ವಲಸೆ ಕಾರ್ಮಿಕರು ಸೇರಿದಂತೆ ಇತರ ವಿಭಾಗದ ಕಾರ್ಮಿಕರು ದಿನನಿತ್ಯ ದುಡಿಮೆ ಮಾಡುವ ಮೂಲಕ ಭವ್ಯ ಭಾರತಕ್ಕೆ ಅಡಿಪಾಯ ಹಾಕುತ್ತಿದ್ದಾರೆ. ಅವರ ಶ್ರಮ ಸಾರ್ಥಕವಾಗಿದ್ದು ಅದನ್ನು ಗೌರವಿಸುವುದು, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು.

ಕನ್ನಡಪ್ರಭ ವಾರ್ತ ಮದ್ದೂರು

ದುಡಿಯುವ ಎಲ್ಲ ವರ್ಗದ ಕಾರ್ಮಿಕರು ದೇಶ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಳಗೆರಹಳ್ಳಿ ವಿ.ಸಿ.ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ವಳಗೆರಹಳ್ಳಿ ಹೊರ ವಲಯದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಕೃಷಿ ಕೂಲಿ ಕಾರ್ಮಿಕರನ್ನು ವೇದಿಕೆಯಿಂದ ಅಭಿನಂದಿಸಿ ಮಾತನಾಡಿ, ಕಾರ್ಮಿಕರ ಶ್ರಮದಿಂದ ದೇಶದ ಪ್ರಗತಿ ಸಾಧ್ಯ. ಕಾರ್ಮಿಕರು ದಿನನಿತ್ಯ ದುಡಿಮೆ ಮಾಡುವ ಮೂಲಕ ಸಮೃದ್ಧ ದೇಶವನ್ನು ಕಟ್ಟುತ್ತಿದ್ದಾರೆ ಎಂದರು.

ಕೈಗಾರಿಕೆಗಳಲ್ಲಿ ದುಡಿಯುವವರು, ಕೃಷಿ ಕೂಲಿಕಾರರು, ವಲಸೆ ಕಾರ್ಮಿಕರು ಸೇರಿದಂತೆ ಇತರ ವಿಭಾಗದ ಕಾರ್ಮಿಕರು ದಿನನಿತ್ಯ ದುಡಿಮೆ ಮಾಡುವ ಮೂಲಕ ಭವ್ಯ ಭಾರತಕ್ಕೆ ಅಡಿಪಾಯ ಹಾಕುತ್ತಿದ್ದಾರೆ. ಅವರ ಶ್ರಮ ಸಾರ್ಥಕವಾಗಿದ್ದು ಅದನ್ನು ಗೌರವಿಸುವುದು, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದರು.

ಕಾರ್ಮಿಕ ನಾಯಕರಾದ ಕಾರ್ಲ್ ಮಾರ್ಕ್ಸ್, ಡಾ.ಬಿ.ಆರ್.ಅಂಬೇಡ್ಕರ್, ನೆಲ್ಸನ್ ಮಂಡೇಲಾ ಸೇರಿದಂತೆ ಹಲವು ಮಹನೀಯರು ಕಾರ್ಮಿಕರ ಪರವಾಗಿ ಧ್ವನಿಯೆತ್ತಿ ಹೋರಾಟ ಮಾಡಿ ಕಾನೂನುಗಳನ್ನು ರೂಪಿಸಿ ಕಾರ್ಮಿಕರ ಹಕ್ಕುಗಳನ್ನು ಸಂವಿಧಾನಬದ್ಧವಾಗಿ ರಕ್ಷಿಸುತ್ತಿದ್ದು ಕಾರ್ಮಿಕರಿಗೆ ವರದಾನವಾಗಿದೆ ಎಂದರು.

ನಮ್ಮ ರಾಜ್ಯದಲ್ಲಿ ಅಸಂಘಟಿತ ವಲಯದ ಹಲವಾರು ಕಾರ್ಮಿಕರಿದ್ದು, ಅವರೆಲ್ಲರನ್ನು ಸಂಘಟನೆ ಮಾಡಬೇಕಾದಾಗ ಅಗತ್ಯತೆ ಇದೆ‌. ಸರ್ಕಾರ ಅವರಿಗೆ ಮೂಲ ಸೌಕರ್ಯ ನೀಡಬೇಕಾಗಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕೋಟ್ಯಂತರ ಹಣವಿದ್ದು ಅದನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಬಳಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರಿಗೆ ನೀಡುತ್ತಿರುವ ವಿಮೆ ಹಣವನ್ನು ಹೆಚ್ಚಿಸಬೇಕು. ಕಾರ್ಮಿಕರಿಗೆ ಅಪಘಾತವಾದ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ನೀಡಬೇಕು. ಕಾರ್ಮಿಕರಿಗೆ ನೀಡುತ್ತಿರುವ ಮಾಸಾಸನವನ್ನು ಸರ್ಕಾರ ಹೆಚ್ಚು ಮಾಡಿ ಜಾರಿಗೊಳಿಸಿ ಕಾರ್ಮಿಕರ ಜೀವನವನ್ನು ಹಸನು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದೇ ವೇಳೆ ಕೃಷಿ ಕೂಲಿ ಕಾರ್ಮಿಕರಾದ ವಳಗೆರೆಹಳ್ಳಿ ಕಾಡಪ್ಪ, ಚಿಕ್ಕೋನು, ರಾಮು ಸೇರಿದಂತೆ ಇತರರನ್ನು ಅಭಿನಂದಿಸಲಾಯಿತು. ವೇದಿಕೆ ಮುಖಂಡರಾದ ವಿ.ಸಿ. ಗಂಗಾಧರ, ವಿ.ಸಿ. ಪುರುಷೋತ್ತಮ, ನವ್ಯ ರಾಜ್ ಗೌಡ, ಸಿ.ಜಿ. ಖುಷಿ ಗೌಡ, ಸಿ.ಕೆ. ಶಶಿಕಲಾ ಸೇರಿದಂತೆ ಇತರರಿದ್ದರು.

Share this article