ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೆಂಗಳೂರು ವಿಭಾಗದ 9 ಜಿಲ್ಲೆಗಳ ಸಚಿವರು, ಶಾಸಕರು ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಇದರೊಂದಿಗೆ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಹಾಗೂ 9 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಒಟ್ಟು 350 ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜು.25ರ ಬೆಳಿಗ್ಗೆ 11 ಗಂಟೆಗೆ ಹಿರಿಯೂರು ತಾಲೂಕಿನ ಎರಡ್ಮೂರು ಕಡೆಗಳಲ್ಲಿ ಬರ ಪರಿಶೀಲನೆ ನಡೆಸಿ ನಂತರ ಚಿತ್ರದುರ್ಗದ ಸಭೆಗೆ ಆಗಮಿಸುತ್ತಿದ್ದಾರೆ. ಈ ಸಭೆ ವಿಶೇಷವಾಗಿ ಬರಕ್ಕೆ ಪೂರಕವಾಗಿ ನಡೆಯುತ್ತಿದೆ ಎಂದರು.ಈಗಾಗಲೇ ಬೆಂಗಳೂರು ವಿಭಾಗ ಮಟ್ಟದ 9 ಜಿಲ್ಲೆಗಳ ವಿಪತ್ತು ನಿರ್ವಹಣೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜಲಜೀವನ್ ಮಿಷನ್, ನಗರಾಭಿವೃದ್ಧಿ, ಸಣ್ಣ ನೀರಾವರಿ, ಶಾಲಾ ಶಿಕ್ಷಣ, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳ ಮಾಹಿತಿಗಳನ್ನು ಸರ್ಕಾರದಿಂದ ಸಂಗ್ರಹಿಸಿಲಾಗಿದೆ. ಇದರ ಹೊರತಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರಾವರಿ ವಿಸ್ತರಣೆ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನ ಸೆಳೆಯಬಹುದು. ಈ ಹಿನ್ನಲೆಯಲ್ಲಿ ಹೊಳಲ್ಕೆರೆ, ಹಿರಿಯೂರು ತಾಲೂಕುಗಳ ಪ್ರದೇಶಗಳನ್ನು ನೀರಾವರಿ ಯೋಜನೆಗೆ ಒಳಪಡಿಸುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗಳ ವಿವರಗಳನ್ನು ನೀಡಿದರೆ, ಸಭೆಯಲ್ಲಿ ಉತ್ತರಿಸಲು ಅನುವಾಗುತ್ತದೆ ಎಂದರು.
ಜಿಪಂ ಸಿಇಒ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮತ್ತಿತರು ಇದ್ದರು.