ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಾಣಿ ವಿಲಾಸ ಸಾಗರ ಜಲಾಶಯದಿಂದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ 367 ಕೋಟಿ ರು. ವೆಚ್ಚದ ಬೃಹತ್ ಯೋಜನೆ ಪೂರ್ಣಗೊಂಡಿದ್ದು, ಇನ್ನೂ ಒಂದೂವರೆ ತಿಂಗಳೊಳಗೆ ಸಂಪೂರ್ಣ ತಾಲೂಕಿಗೆ ನಿಯಮಿತವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಆರಂಭವಾಗಲಿದೆ.
ವಾಣಿ ವಿಲಾಸ ಸಾಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೃಹತ್ ‘ಜಾಕ್ ವೆಲ್’ ಹಾಗೂ ನೀರೆತ್ತುವ ಕಾಮಗಾರಿ ವೀಕ್ಷಣೆಗೆ ತಮ್ಮ ಬೆಂಬಲಿಗರ ದಂಡು ಕಟ್ಟಿಕೊಂಡು ಬಂದಿದ್ದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಹೊಳಲ್ಕೆರೆ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಮುಂದಿನ 2052ನೇ ಇಸವಿಯವರೆಗೆ ಹೆಚ್ಚಾಗಬಹುದಾದ ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ವಿನ್ಯಾಸಗೊಳಿಸಲಾಗಿದೆ. ಸುಮಾರು ಮೂರೂವರೆ ಯಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದರು.ವಿವಿ ಸಾಗರದ ಜಾಕ್ ವೆಲ್ ಜಾಗದಿಂದ ನೀರೊಳಗೆ 100 ಅಡಿ ಆಳದಲ್ಲಿ ನೀರಿದೆ. ಆ ನೀರಿನ ಕೆಳಗೆ 40 ಅಡಿ ದಪ್ಪದ ಬಂಡೆಯಿದ್ದು, 45 ಅಡಿ ಬಂಡೆಯನ್ನು ಕೊರೆದು ಪೈಪ್ ಪಿಲ್ಲರ್‌ಗಳನ್ನು ಸ್ಥಾಪಿಸಲಾಗಿದೆ. ನೀರಿನ ಮಟ್ಟಕ್ಕಿಂತ ಮೇಲೆ 30 ಅಡಿ ಎತ್ತರದ ಪಿಲ್ಲರ್‌ಗಳನ್ನು ನಿರ್ಮಿಸಿ, ಒಟ್ಟು 170 ಅಡಿ ಎತ್ತರದ ಬೃಹತ್ ಜಾಕ್ ವೆಲ್ ಕಟ್ಟಡ ನಿರ್ಮಿಸಲಾಗಿದೆ ಎಂದರು.
ವಾಣಿ ವಿಲಾಸ ಸಾಗರದಿಂದ 25 ಕಿ.ಮೀ ದೂರದಲ್ಲಿರುವ ಹಾಲೇನಹಳ್ಳಿಯಲ್ಲಿರುವ 60 ಕೋಟಿ ರು. ವೆಚ್ಚದ ಫಿಲ್ಟರ್ ಘಟಕಕ್ಕೆ ನೀರನ್ನು ಹಾಯಿಸಿ, ನಂತರ ಗಟ್ಟಿಹೊಸಹಳ್ಳಿ ಗುಡ್ಡದಲ್ಲಿರುವ ಎತ್ತರದ ಪ್ರದೇಶಕ್ಕೆ ಲಿಫ್ಟ್ ಮಾಡಲಾಗುತ್ತದೆ. ಗಟ್ಟಿಹೊಸಹಳ್ಳಿಯಿಂದ ಇಡೀ ತಾಲೂಕಿಗೆ ಗುರುತ್ವಾಕರ್ಷಣೆ ಆಧಾರದ ಮೇಲೆ 625 ಕಿ.ಮೀ ಉದ್ದದ ಬೃಹತ್ ಪೈಪ್‍ಲೈನ್ ಜಾಲದ ಮೂಲಕ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.
ಯುವ ಮುಖಂಡ ಎಂ.ಸಿ.ರಘು ಚಂದನ್, ಕುಮಾರ್, ಸಿದ್ದೇಶ್, ಡಿ.ಸಿ.ಮೋಹನ್, ತಿಪ್ಪೇಸ್ವಾಮಿ, ಈಶಣ್ಣ, ರಮೇಶ್, ಪ್ರವೀಣ್, ರಂಗಸ್ವಾಮಿ, ನಿತಿನ್, ಬಂಗಾರಪ್ಪ, ನಾಗರಾಜ್ ಶಿವಪುರ, ಚಿತ್ರಹಳ್ಳಿ ದೇವರಾಜ್ ಇದ್ದರು.