-ತಹಸೀಲ್ದಾರ್ ಸರಕಾವಸ್ ಮೂಲಕ ರಾಷ್ಟ್ರಪತಿಗೆ ಮನವಿ
ಕನ್ನಡಪ್ರಭ ವಾರ್ತೆ ಸುರಪುರ
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕೆಂದು ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ, ರಾಜ್ಯ ದಲಿತ ಮಹಿಳಾ ಒಕ್ಕೂಟ (ಕ್ರಾಂತಿಕಾರಿ) ಆಗ್ರಹಿಸಿತು.ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಸಂಘಟನೆಯ ಮುಖಂಡರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆಗೆ ಸಂಬಂಧಿಸಿದ ಘಟನೆಗಳಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಪ್ರತಿ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು. ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕ ಹಾಗೂ ವಿಶ್ವಾಸಾರ್ಹವಾಗಿಸಬೇಕು. ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದ ಪ್ರತಿಭಟನಾಕಾರರು, ಪ್ರಕರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
------
ಸುರಪುರದ ಮಹಾತ್ಮ ಗಾಂಧಿ ವೃತ್ತದಲ್ಲಿ ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಮುಖಂಡರು ಹಾಗೂ ವಿದ್ಯಾರ್ಥಿಗಳು ತಹಸೀಲ್ದಾರ್ ಎಚ್.ಎ. ಸರಕಾವಸ್ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.