-ಶರಣರ ತತ್ವಾದರ್ಶನಗಳು ವಿಶ್ವದಾದ್ಯಂತ ಪಸರಿಸಲಿ: ಡಾ. ಚನ್ನಬಸವನಂದ ಸ್ವಾಮಿ ಅಭಿಮತ
ಕನ್ನಡಪ್ರಭ ವಾರ್ತೆ ಸೈದಾಪುರ
ಬಸವಾದಿ ಶರಣರ ವಚನಗಳು, ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ತತ್ವಾದರ್ಶನಗಳು ಜಗತ್ತಿನಾದ್ಯಂತ ಪಸರಿಸಬೇಕಾಗಿದೆ ಎಂದು ಡಾ. ಚನ್ನಬಸವನಂದ ಸ್ವಾಮೀಜಿ ಹೇಳಿದರು.ಪಟ್ಟಣದ ವಿಶ್ವನಾಥ ಮಂದಿರದಲ್ಲಿ ಆಯೋಜಿಸಿದ್ದ ಮೂರನೇ ಬಸವ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಯಚೂರಿನ ಗಂಜ್ ಕಲ್ಯಾಣ ಮಂಟಪದಲ್ಲಿ ಜುಲೈ 25 ಹಾಗೂ 26ರಂದು ಎರಡು ದಿನಗಳ ಕಾಲ ಮೂರನೇ ಬಸವ ಉತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದ್ದು, ಈ ಉತ್ಸವವು ಬಸವ ತತ್ವಗಳ ಪ್ರಚಾರ-ಪ್ರಸಾರಕ್ಕೆ ಮಹತ್ವದ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಬಸವಣ್ಣನವರು ಬೋಧಿಸಿದ ಸಮಾನತೆ, ಮಾನವೀಯತೆ, ಕಾಯಕ ಹಾಗೂ ಸಾಮಾಜಿಕ ನ್ಯಾಯದ ಸಂದೇಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲ ಶರಣ ಬಂಧುಗಳು ಹಾಗೂ ಸಾರ್ವಜನಿಕರು ಸಮಯಾನುಕೂಲ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಕಾಶಗೌಡ ಸೈದಾಪುರ, ಬಸವಲಿಂಗಪ್ಪಗೌಡ ಐರೆಡ್ಡಿ, ಈಶಪ್ಪಗೌಡ ಚಿಗಾನೂರು, ಗಂಗಾಧರ ಚಂದ್ರಗಿರಿ, ಸಿದ್ದಲಿಂಗಪ್ಪಗೌಡ, ಮಲ್ಲಿಕಾರ್ಜುನ ಬಳೆ, ಬನಯ್ಯಸ್ವಾಮಿ ಬದ್ದೇಪಲ್ಲಿ, ಸೂಗಪ್ಪ ಸಾಹುಕಾರ, ದೇವರಾಜಗೌಡ ಹೆಗ್ಗಣಗೇರಾ, ಜಗದೀಶ ಸಜ್ಜನ್ ಸೌರಾಷ್ಟ್ರಹಳ್ಳಿ, ವಿರೇಶ ಸಜ್ಜನ್, ಬಂದಪ್ಪಗೌಡ ದುಪ್ಪಲ್ಲಿ, ರಾಜುಗೌಡ, ಸಂಪತಕುಮಾರ ಸಜ್ಜನ್, ನಾಗರಾಜ ಸ್ವಾಮಿ, ರಾಜು ಸ್ವಾಮಿ ಹಾಗೂ ಶಿವು ಸ್ವಾಮಿ ಉಪಸ್ಥಿತರಿದ್ದರು.
ಸೈದಾಪುರ ಪಟ್ಟಣದ ವಿಶ್ವನಾಥ ಮಂದಿರದಲ್ಲಿ ಗುರುಬಸವ ಜ್ಯೋತಿ ಯಾತ್ರೆಗೆ ಸ್ವಾಗತ ಕೋರಿ, ರಾಯಚೂರಿನಲ್ಲಿ ಜರಗುವ ಮೂರನೇ ಬಸವ ಉತ್ಸವದ ಪೂರ್ವಭಾವಿ ಸಭೆ ನಡೆಯಿತು.