ಧಾರವಾಡ: ಬಸವಾದಿ ಶರಣರ ವಚನ ಸಾಹಿತ್ಯದ ಅಧ್ಯಯನದಿಂದ ಪ್ರಗತಿಪರ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕ ವೀರಣ್ಣ ರಾಜೂರ ಹೇಳಿದರು.
ಶರಣರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ವೈಚಾರಿಕ ಕ್ರಾಂತಿ ಮಾಡಿದರು. ವ್ಯಕ್ತಿ ತಾರತಮ್ಯ, ಶ್ರೇಣೀಕೃತ ಜಾತಿ ತಾರತಮ್ಯ, ದೇವರಲ್ಲಿನ ಭೇದಭಾವ ಹೋಗಲಾಡಿಸಲು ಶ್ರಮಿಸಿದರು. ನುಡಿದಂತೆ ನಡೆದರು. ಅಂತೆಯೇ ವಚನಗಳನ್ನು ನಾವೆಲ್ಲರೂ ನಿತ್ಯ ಜೀವನದಲ್ಲಿ ಪಚನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕೆಎಲ್‌ಇ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥೆ ವೀಣಾ ಹೂಗಾರ ಮಾತನಾಡಿ. ಶರಣರು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಹುಟ್ಟಿನಿಂದ ಬಂದ ಶ್ರೇಷ್ಠ, ಕನಿಷ್ಠ ಪರಿಕಲ್ಪನೆಯನ್ನು ಅವರು ವಿರೋಧಿಸಿದರು. ಹೆಣ್ಣುಮಕ್ಕಳ ಸಮಾನತೆಗೆ ಧ್ವನಿ ಎತ್ತಿ, ತಳಸಮುದಾಯವನ್ನು ಅಪ್ಪಿಕೊಂಡರು. ತಾವು ಆಳಿದರು ವಚನ ಉಳಿಯಬೇಕೆಂಬುದು ಅವರ ನಿಲುವಾಗಿತ್ತು. ವಚನ ಸಾಹಿತ್ಯದಲ್ಲಿ ಶರಣೆಯರ ಕೊಡುಗೆ ಅಪಾವಾದದ್ದು, ಶರಣರ ಆಶಯವನ್ನು ಅರ್ಥೈಸಿಕೊಂಡು ಓದುವ ಕೆಲಸವಾಗಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕವಿವಿ ಸಂಗೀತ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ಅಗಡಿ, ಸಮಾಜ ತಿದ್ದಲು ವಚನ ಸಾಹಿತ್ಯ ಅವಶ್ಯಕ. ವಚನಗಳ ಸಾಹಿತ್ಯವು ಜೀವದ ಮಾರ್ಗ ತಿಳಿಸುತ್ತದೆ. ಬಸವಾದಿ ಶರಣರ ಮತ್ತು ದಾರ್ಶನಿಕರ ಚಿಂತನೆ ಮತ್ತು ತತ್ವಗಳನ್ನು ಪ್ರತಿಯೊಬ್ಬ ವ್ಯಕ್ತಿ ಅಳವಡಿಕೊಳ್ಳಬೇಕು ಎಂದರು.
ಬಸವ ಅಧ್ಯಯನ ವಿಭಾಗ ಸಂಯೋಜಕ ಡಾ. ಸಿ.ಎಂ. ಕುಂದಗೋಳ, ಡಾ. ಈರಣ್ಣ ಇಂಜಗನೇರಿ, ಕುಮಾರ ಮಂಗಳಗಟ್ಟಿ, ಶಂಕರ ಕುಂಬಿ, ದತ್ತಿದಾನಿಗಳಾದ ಕುಮಾರ ತೇಲಿ, ಮತ್ತು ಸುಜಾತಾ ತೇಲಿ ಇದ್ದರು. ನಂದಾ ಹೆಗ್ಗೆರಿ ನಿರೂಪಿಸಿದರು. ಭಾರ್ಗವಿ ವಂದಿಸಿದರು.