ಎಚ್.ಎನ್.ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀ ಸ್ಥಳ ಮುತ್ತತ್ತಿಯಲ್ಲಿ ಹೊಸ ವರ್ಷಾಚರಣೆಗೆ ಬಂದು ಮೋಜು ಮಸ್ತಿ ಮಾಡಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಅಪಾಯ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ತಾಲೂಕು ಆಡಳಿತ ನಿಷೇಧಾಜ್ಞೆ ಮಾಡಿದ್ದರಿಂದ ಪ್ರಯುಕ್ತ ಭಕ್ತರು ಹಾಗೂ ಪ್ರವಾಸಿಗರಿಲ್ಲದೆ ಗ್ರಾಮ ಬಣ ಗುಡುತ್ತಿತ್ತು.
ಅಚ್ಚ ಹಸಿರಿನಿಂದ ಕೂಡಿರುವ ಪ್ರವಾಸಿ ತಾಣ ಮುತ್ತತ್ತಿ ಪ್ರದೇಶವನ್ನು ನೋಡಲು ಬರುವ ಪ್ರವಾಸಿಗರು ಪಕ್ಕದಲ್ಲೆ ಹರಿಯುವ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವು ಸಂಭವಿಸುತ್ತಿದ್ದವು. ಹೊಸ ವರ್ಷದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೋಜು, ಮಸ್ತಿ ಮಾಡಲು ಆಗಮಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿದ್ದರು.ಅಪಾರ ಭಕ್ತರನ್ನು ಹೊಂದಿರುವ ಮುತ್ತತ್ತಿರಾಯನ ದೇವಸ್ಥಾನಕ್ಕೆ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆಯಿಂದ ಪ್ರವಾಸಿಗರು ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದರು. ನಿಷೇಧಾಜ್ಞೆ ಇದ್ದರೂ ಸಹ ಪ್ರವಾಸಿಗರು, ಭಕ್ತರು ಮುತ್ತತ್ತಿಗೆ ಹೋಗಲು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದರು. ಆದರೆ, ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ನಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರ ಪರಿಣಾಮ ನಿರಾಸೆಯಿಂದ ಹಿಂದಿರುಗಿದ್ದರು.
ಡಿ.15ರಿಂದ ಜನವರಿ 14ರವರೆಗೆ ಧನುರ್ಮಾಸ ಪೂಜಾ ಕಾರ್ಯಕ್ರಮಗಳು ದಿನನಿತ್ಯ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮುತ್ತತ್ತಿಗೆ ಬರುತ್ತಿದ್ದರು. ಆದರೆ, ಎರಡು ದಿನಗಳ ಕಾಲ ಪೂಜೆ ಇಲ್ಲದೆ ಮುತ್ತತ್ತಿ ದೇವಸ್ಥಾನಕ್ಕೆ ಭಕ್ತರು ಇಲ್ಲದೆ ಬಿಕೋ ಎನ್ನುತ್ತಿತ್ತು.ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತಾಲೂಕು ಆಡಳಿತ ಮುತ್ತತ್ತಿಗೆ ಬರುವ ಪ್ರವಾಸಿಗರಿಗೆ ಹಾಗೂ ಭಕ್ತಾದಿಗಳಿಗೆ ಪ್ರವೇಶ ಅವಕಾಶ ಮಾಡದಂತೆ ಆದೇಶ ನೀಡುವಂತೆ ಪತ್ರದ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಡಾ.ಲೋಕೇಶ್ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದರು.
ಪೊಲೀಸ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ, ಅರಣ್ಯ ಇಲಾಖೆಯ ಆರ್.ಎಫ್.ಅನಿಲ್ ನೇತೃತ್ವದಲ್ಲಿ ಹಲಗೂರು ಮುತ್ತತ್ತಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಹಾಗೂ ಸಾತನೂರು ಕಡೆಯಿಂದ ಬರುವ ಎರಡು ಕಡೆಯೂ ಸಹ ಪ್ರವಾಸಿಗರನ್ನು ಮುತ್ತತ್ತಿಗೆ ಪ್ರವೇಶ ನೀಡಲಿಲ್ಲ.ಅರಣ್ಯ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಇಲಾಖೆ ಎಎಸ್‌ಐ ಶಿವಣ್ಣ ಮತ್ತು ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಮಾಳಪ್ಪ ಪಾಮಲದಿನ್ನಿ, ಮಹಾದೇವ ನ್ಯಾಮಗೌಡ, ಶ್ರೇಯಾಂಶ್, ಮಹೇಶ್ ಡಿ, ಪಿ.ಸಂಜಯ್ ಕುಮಾರ್, ಶಿವ, ಮಾಯಪ್ಪ ಸೇರಿದಂತೆ ಹಲವರು ಬಿಗಿ ಬಂದೋಬಸ್ತ್‌ನಲ್ಲಿ ತೊಡಗಿದ್ದರು.
ದೇವಾಲಯಗಳಲ್ಲಿ ವಿಶೇಷ ಪೂಜೆಹಲಗೂರು:
ಹೊಸ ವರ್ಷದ ಹಿನ್ನೆಲೆಯಲ್ಲಿ ವಿವಿಧೆಡೆ ಸಾರ್ವಜನಿಕರು, ಯುವಕರು, ಮಕ್ಕಳು, ಮಹಿಳೆಯರು ದೇವಾಲಯಗಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಬುಧವಾರದ ಬೆಳಗ್ಗೆಯಿಂದಲೇ ಹಲಗೂರು ವಿದ್ಯಾ ಗಣಪತಿ, ಪಟ್ಟಲದಮ್ಮ, ಕಾಳಿಕಾಂಬ, ಕೊನ್ನಾಪುರ ಶಂಭುಲಿಂಗೇಶ್ವರ, ರಾಮಮಂದಿರ, ಎಲ್ಲಮ್ಮ ತಾಯಿ ದೇವಸ್ಥಾನಗಳು ಸೇರಿದಂತೆ ಇನ್ನೂ ಇತರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಮುತ್ತೈದಿಯರು ದೇವಸ್ಥಾನಕ್ಕೆ ಬಂದು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಹೊಸ ವರ್ಷದಿಂದ ಯಾವುದೇ ಕಷ್ಟಗಳನ್ನು ನೀಡಿದಂತೆ ನಮ್ಮನ್ನು ಅನುಗ್ರಹಿಸು ಎಂದು ದೇವರಲ್ಲಿ ಪ್ರಾರ್ಥಿಸಿದರು.ನೂತನ ಹೊಸ ವರ್ಷವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಯಿತು. ಮನೆಯ ಮುಂದೆ ವಿವಿಧ ರೀತಿಯ ಬಣ್ಣದಿಂದ ನ್ಯೂ ಹ್ಯಾಪಿ ಇಯರ್ ಎಂಬ ರಂಗೋಲಿ ಇಟ್ಟು ಹೊಸ ವರ್ಷ ಆಚರಣೆ ಮಾಡಿದರು. ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗಿ ಪೂಜೆ ಸಲ್ಲಿಸಿದರು.