ಯಲ್ಲಾಪುರ: ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಸಮೀಕ್ಷೆಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂಬ ಹಕ್ಕೊತ್ತಾಯದ ಮನವಿಯನ್ನು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದ ನಿಯೋಗವು ಡಿ. ೩೦ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಅರಣ್ಯ ಸಚಿವರಿಗೆ ರವಾನಿಸಿದೆ.ಯಲ್ಲಾಪುರ ಮತ್ತು ಶಿರಸಿ ತಾಲೂಕುಗಳ ವ್ಯಾಪ್ತಿಯಲ್ಲಿ ಬೇಡ್ತಿ ಹಾಗೂ ಶಾಲ್ಮಲಾ ನದಿಗೆ ಅಡ್ಡಲಾಗಿ ಅಣೆಕಟ್ಟುಗಳ ನಿರ್ಮಾಣ ಹಾಗೂ ಬೇಡ್ತಿ ಶಾಲ್ಮಲಾ ಪಟ್ಟಣದ ನದಿಗಳ ನೀರನ್ನು ವರದಾ ನದಿಗೆ ಕೊಂಡೊಯ್ಯುವ ನದಿ ತಿರುವು ಯೋಜನೆಗಳ ಪ್ರಸ್ತಾಪವಾಗುತ್ತಿದೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಬೇಡ್ತಿ- ವರದಾ ಯೋಜನೆ ಜಾರಿ ಕುರಿತು ಪ್ರಸ್ತಾಪವಾಗಿದ್ದು, ರಾಜ್ಯ ಸರ್ಕಾರದ ನೀರಾವರಿ ಇಲಾಖೆ ಸದ್ದಿಲ್ಲದೇ ಯೋಜನೆ ಜಾರಿಗೆ ಇಳಿಯುವ ಮುನ್ಸೂಚನೆ ಇದೆ. ಅರಣ್ಯ ಸಚಿವರು ಪಶ್ಚಿಮಘಟ್ಟದಲ್ಲಿ ಯಾವುದೇ ಪರಿಸರ ವಿರೋಧಿ ಯೋಜನೆಗೆ ಅವಕಾಶ ನೀಡಬಾರದು.
ಘಟ್ಟದ ಶರಾವತಿ ಕಣಿವೆ ಸಂರಕ್ಷಣೆಗಾಗಿ ಭೂಗತ ಜಲವಿದ್ಯುತ್ ಯೋಜನೆ ಜಾರಿ ಮಾಡಬಾರದು. ದಕ್ಷಿಣ ಭಾರತದ ಆಹಾರ ಸುರಕ್ಷತೆಗೆ ಪಶ್ಚಿಮ ಘಟ್ಟದ ರಕ್ಷಣೆ ಆಗಬೇಕು. ಬೇಡ್ತಿ- ಶಾಲ್ಮಲಾ ನದಿ ಕಣಿವೆಗಳು ವನ್ಯಜೀವಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುತ್ತವೆ. ಬೇಡ್ತಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಭೂಕುಸಿತ ಪ್ರಕರಣಗಳಿವೆ ಎಂಬುದನ್ನು ಗಮನಿಸಬೇಕಿದೆ.ಜಿಲ್ಲೆಯ ಪಟ್ಟಣಗಳಿಗೆ ಕುಡಿಯುವ ನೀರು ನೀಡಲು ಆಗದಷ್ಟು(ಬೇಸಿಗೆಯಲ್ಲಿ) ನದಿಗಳು ಒಣಗುತ್ತಿವೆ. ಇಲ್ಲಿನ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ವನ್ಯಜೀವಿ ಕಾಯ್ದೆ ಅರಣ್ಯ ಜೀವವೈವಿಧ್ಯ ಪರಿಸರ ಕಾಯ್ದೆಗಳ ಉಲ್ಲಂಘನೆ ಆಗದಂತೆ ಘಟ್ಟದಲ್ಲಿ ಬೇಡ್ತಿ ಯೋಜನೆ ಪ್ರಸ್ತಾಪಕ್ಕೆ ತಡೆ ನೀಡಬೇಕು. ಕರಾವಳಿಯ ಮೀನುಗಾರರು ಮತ್ತು ರೈತರ ಬದುಕಿಗೆ ಬೇಡ್ತಿ ಗಂಗಾವಳಿ ನದಿ ನೀರು ಆಧಾರ. ಈ ಕಾರಣದಿಂದ ಘಟ್ಟದ ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂಬುದು ಅವೈಜ್ಞಾನಿಕ.ಬೇಡ್ತಿ ಕಣಿವೆ ಪ್ರದೇಶದಲ್ಲಿ ಬೃಹತ್ ಜಲವಿದ್ಯುತ್ ಯೋಜನೆಗಳು ಭಾರಿ ಜನಾಂದೋಲನದಿಂದಾಗಿ ಕಾರ್ಯಗತವಾಗಿಲ್ಲ. ಅದೇ ರೀತಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ಸೋಂದಾ ಸ್ವರ್ಣವಲ್ಲೀ ಸ್ವಾಮಿಗಳ ಮಾರ್ಗದರ್ಶನದಂತೆ ಮುಂದಿನ ಹೋರಾಟದ ಹೆಜ್ಜೆ ಇಡಲಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದ ನಿಯೋಗದಲ್ಲಿ ಆಂದೋಲನದ ಪ್ರಮುಖರಾದ ನರಸಿಂಹ ಸಾತೊಡ್ಡಿ, ಟಿ.ಆರ್. ಹೆಗಡೆ, ಕೆ.ಎಸ್. ಭಟ್ಟ ಆನಗೋಡ ಪಾಲ್ಗೊಂಡಿದ್ದರು.