400 ಪಟ್ಟು ಹೆಚ್ಚಿದ ಯೋಜನಾ ವೆಚ್ಚ..!

KannadaprabhaNewsNetwork |  
Published : Jul 31, 2025, 12:46 AM IST
ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ನೀಲನಕ್ಷೆ. | Kannada Prabha

ಸಾರಾಂಶ

ಕರಾವಳಿ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಹುಬ್ಬಳ್ಳಿಯನ್ನು ಸಂಪರ್ಕಿಸುವ ಹಲವು ಬಗೆಯ ಉದ್ಯಮಗಳಿಗೆ ಉತ್ತೇಜನ ನೀಡುವ ಹುಬ್ಬಳ್ಳಿ- ಅಂಕೋಲಾ ಬಗ್ಗೆ ರಾಜ್ಯಸಭೆಯಲ್ಲಿ ಇತ್ತೀಚಿಗೆ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರು ಪ್ರಸ್ತಾಪಿಸಿದ್ದಾರೆ. ಯೋಜನೆಗೆ ಇನ್ನು ರೈಲ್ವೆ ಅಭಿವೃದ್ಧಿ ಮಂಡಳಿಯಿಂದ ಅಧಿಕೃತವಾಗಿ ಅನುಮೋದನೆ ಸಿಕ್ಕಿಲ್ಲ. ಆದರೆ, ರೈಲ್ವೆ ಸಚಿವರೇ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿರುವುದರಿಂದ ಯೋಜನೆಗೆ ಹಸಿರು ನಿಶಾನೆ ಸಿಗುವ ಕಾಲ ಸನ್ನಿಹಿತ ಎಂಬುದು ಮಾತ್ರ ಸ್ಪಷ್ಟ.

ಶಿವಾನಂದ ಗೊಂಬಿ

ಹುಬ್ಬಳ್ಳಿ: 1999 ರಲ್ಲಿ ಕೇವಲ ₹494 ಕೋಟಿ ವೆಚ್ಚದ ಹುಬ್ಬಳ್ಳಿ- ಅಂಕೋಲಾ ನಡುವಿನ ರೈಲ್ವೆ ಮಾರ್ಗ ಯೋಜನೆಗೆ 26 ವರ್ಷದ ಬಳಿಕ ಯೋಜನಾ ವೆಚ್ಚ ಸುಮಾರು 400 ಪಟ್ಟು ಹೆಚ್ಚಿ ಬರೋಬ್ಬರಿ ₹17141 ಕೋಟಿ ತಲುಪಿದೆ.

ಹೌದು, 1999ರಲ್ಲಿ ಯೋಜನೆಗೆ ಆಗಿನ ಪ್ರದಾನಿ ಅಟಲ್‌ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗ ಇದರ ವೆಚ್ಚ ಕೇವಲ ₹494 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಈ ಯೋಜನೆಗೆ ₹17141 ಕೋಟಿ ಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ. ಹೀಗಾಗಿ ಮೊದಲಿಗಿಂತ ನಾಲ್ಕುನೂರು ಪಟ್ಟು ಯೋಜನಾ ವೆಚ್ಚ ಹೆಚ್ಚಳವಾದಂತಾಗಿದೆ.

ಇವಿಷ್ಟಲ್ಲದೇ, 57 ಸುರಂಗ..., 10 ಹೆಕ್ಟೇರ್‌ ಅರಣ್ಯ ಪ್ರದೇಶ ಕಡಿತ.., 13 ಕಿಮೀಗೂ ಉದ್ದದ ಮೇಲ್ಸೇತುವೆ...!. ಇದಕ್ಕೆ ತಗಲುವ ವೆಚ್ಚ ₹17141, ನಾನೂರು ಪಟ್ಟು ಹೆಚ್ಚಳವಾಗಿದೆ!

ಇವು ಬಯಲುಸೀಮೆ ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಸೇತುವೆಯಾಗುವ, ವಾಣಿಜ್ಯೀಕರಣಕ್ಕೆ ಅನುಕೂಲತೆ ಕಲ್ಪಿಸುವ ಹುಬ್ಬಳ್ಳಿ- ಅಂಕೋಲಾ ನೂತನ ರೈಲು ಮಾರ್ಗದ ಕುರಿತು ಡಿಪಿಆರ್‌ (ವಿಸ್ತೃತ ಯೋಜನಾ ವರದಿ)ನಲ್ಲಿ ತಿಳಿಸಿರುವ ಪ್ರಮುಖಾಂಶಗಳು.

ಕರಾವಳಿ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಹುಬ್ಬಳ್ಳಿಯನ್ನು ಸಂಪರ್ಕಿಸುವ ಹಲವು ಬಗೆಯ ಉದ್ಯಮಗಳಿಗೆ ಉತ್ತೇಜನ ನೀಡುವ ಹುಬ್ಬಳ್ಳಿ- ಅಂಕೋಲಾ ಬಗ್ಗೆ ರಾಜ್ಯಸಭೆಯಲ್ಲಿ ಇತ್ತೀಚಿಗೆ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರು ಪ್ರಸ್ತಾಪಿಸಿದ್ದಾರೆ. ಯೋಜನೆಗೆ ಇನ್ನು ರೈಲ್ವೆ ಅಭಿವೃದ್ಧಿ ಮಂಡಳಿಯಿಂದ ಅಧಿಕೃತವಾಗಿ ಅನುಮೋದನೆ ಸಿಕ್ಕಿಲ್ಲ. ಆದರೆ, ರೈಲ್ವೆ ಸಚಿವರೇ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿರುವುದರಿಂದ ಯೋಜನೆಗೆ ಹಸಿರು ನಿಶಾನೆ ಸಿಗುವ ಕಾಲ ಸನ್ನಿಹಿತ ಎಂಬುದು ಮಾತ್ರ ಸ್ಪಷ್ಟ.

ಕಳೆದ ಫೆಬ್ರವರಿಯಲ್ಲೇ ನೈಋತ್ಯ ರೈಲ್ವೆ ವಲಯವು ಯೋಜನೆಯ ಕುರಿತಂತೆ ಡಿಪಿಆರ್‌ನ್ನು ಸಲ್ಲಿಸಿದೆ. ಹಾಗಾದರೆ ಡಿಪಿಆರ್‌ನಲ್ಲಿ ಏನಿದೆ. ಪರಿಸರ ವಾದಿಗಳು ವಿರೋಧಿಸುತ್ತಿರುವಂತೆ ಅರಣ್ಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುತ್ತದೆಯೇ ಎಂಬುದನ್ನು ಡಿಪಿಆರ್‌ನಲ್ಲಿ ಎಷ್ಟು ಅರಣ್ಯ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂಬುದಕ್ಕೆಲ್ಲ ಉತ್ತರವಿದೆ.

ಡಿಪಿಆರ್‌ನಲ್ಲಿ ಏನಿದೆ: ಹೊಸಪೇಟೆ- ಅಂಕೋಲಾ ಮಧ್ಯೆ ಹಾಯ್ದು ಹೋಗಿರುವ 263 ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಹಾಯ್ದು ಹೋಗಲಿದೆ. ಜೋಡಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ. ಈ ಮೊದಲು 595 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಪರಿಷ್ಕೃತ ವರದಿಯಲ್ಲಿ 10 ಹೆಕ್ಟೇರನಷ್ಟು ಕಡಿತಗೊಳಿಸಲಾಗಿದೆ. 163 ಕಿ.ಮೀ ಅಂತರದ ಈ ಮಾರ್ಗದಲ್ಲಿ 97 ಕಿ.ಮೀ ಮಾರ್ಗವು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ. ಈ ಪೈಕಿ 46.57 ಕಿ.ಮೀ ಅಂತರದಲ್ಲಿ 57 ಸುರಂಗ ನಿರ್ಮಿಸಬೇಕಾಗುತ್ತದೆ.

ಯಲ್ಲಾಪುರ ​- ಸುಂಕಸಾಳಾ ವರೆಗೆ ಘಟ್ಟ ಪ್ರದೇಶ ಬರುತ್ತದೆ. ಇಲ್ಲಿ ಬೆಟ್ಟ ಕೊರೆದು ಸುರಂಗ ನಿರ್ಮಿಸಬೇಕಾಗುತ್ತದೆ. ಮಾರ್ಗದ ನಾನಾ ಕಡೆಗಳಲ್ಲಿ ತಗ್ಗು ಪ್ರದೇಶಗಳು, ಹೊಂಡಗಳು ಬರುತ್ತವೆ. ಹೀಗಾಗಿ 13.89 ಕಿಮೀ ಉದ್ದದಷ್ಟು ಮೇಲ್ಸೇತುವೆ ನಿರ್ಮಿಸಬೇಕಾಗುತ್ತದೆ ಎಂಬುದನ್ನು ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಭೂಮಿ ಎಷ್ಟು ಬೇಕು?: ಹುಬ್ಬಳ್ಳಿ-​ ಯಲ್ಲಾಪುರ ನಡುವೆ 75 ಕಿ.ಮೀ ಬಯಲು ಪ್ರದೇಶ, ಯಲ್ಲಾಪುರದಿಂದ ಸುಂಕಸಾಳಾದ ವರೆಗೆ 55 ಕಿ.ಮೀ ಘಟ್ಟ ಪ್ರದೇಶವಿದೆ. ಸುಂಕಸಾಳಾದಿಂದ ಅಂಕೋಲಾ ವರೆಗೆ ಗುಡ್ಡಗಾಡು ಇದೆ. ಯೋಜನೆಗೆ ಒಟ್ಟು 995 ಹೆಕ್ಟೇರ್ ಭೂಮಿ ಬೇಕಾಗುತ್ತದೆ. ಇದರಲ್ಲಿ 586 ಹೆಕ್ಟೇರ್ ಅರಣ್ಯ, 184 ಹೆಕ್ಟೇರ್ ನೀರಾವರಿ ಭೂಮಿ ಹಾಗೂ 185 ಹೆಕ್ಟೇರ್ ಒಣಭೂಮಿ, 1.40 ಹೆಕ್ಟೇರ್ ನಗರ ಪ್ರದೇಶ ಒಳಗೊಳ್ಳಲಿದೆ.

ಒಟ್ಟಿನಲ್ಲಿ ಎರಡುವರೆ ದಶಕದ ಬೇಡಿಕೆಯಾಗಿರುವ ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗಕ್ಕೆ ಅನುಮೋದನೆ ಶೀಘ್ರದಲ್ಲೇ ಸಿಗುವುದು ಬಹುತೇಕ ನಿಶ್ಚಿತ ಎಂಬುದಂತೂ ಸತ್ಯ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ