ಬ್ಯಾಡಗಿ: ಗ್ರಾಮೀಣ ಜನರ ಅತ್ಯಂತ ಜನಪ್ರಿಯ ಕಬಡ್ಡಿ ಕ್ರೀಡೆ ಇತ್ತೀಚಿನ ದಿನಗಳಲ್ಲಿ ವೃತ್ತಿಪರ (ಪ್ರೊಫೆಷನಲ್ ) ಕ್ರೀಡೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ಪ್ರೋಕಬಡ್ಡಿ ಲೀಗ್ ಆವೃತ್ತಿಗಳು ಕಬಡ್ಡಿಯ ಜನಪ್ರಿಯತೆಯನ್ನು ದೇಶ ಸೇರಿದಂತೆ ವಿಶ್ವದ ಬಹಳಷ್ಟು ರಾಷ್ಟ್ರಗಳ ಬಾಗಿಲನ್ನು ತಟ್ಟುತ್ತಿದೆ ಎಂದು ಪಾಟ್ನಾ ಪೈರೇಟ್ಸ್ ಮಾಜಿ ಕೋಚ್, ಹಾಲಿ ಥೈಲ್ಯಾಂಡ್ ಕಬಡ್ಡಿ ತಂಡದ ಕೋಚ್ ರವೀಂದ್ರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಹಾವೇರಿ, ಬಿಇಎಸ್ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಬ್ಯಾಡಗಿ ಇವರ ಸಂಯುಕ್ತಾಶ್ರಯದಲ್ಲಿ ಎಚ್ಐವಿ ರೋಗದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಕಬಡ್ಡಿ ವಿಶ್ವದೆಲ್ಲೆಡೆ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಬಂಡವಾಳ ಶಾಹಿಗಳೂ ಹಣ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಕ್ರಿಕೆಟ್ ಬಳಿಕ 2ನೇ ಅತ್ಯಂತ ಜನಪ್ರಿಯ ಕ್ರೀಡೆಯಾಗಿ ಭಾರತದಲ್ಲಿ ಕಬಡ್ಡಿ ಹೊರ ಹೊಮ್ಮಿದೆ, ಇದರಿಂದ ಆಟಗಾರರ ಸಂಪಾದನೆ ಕೋಟಿಗೂ ಅಧಿಕವಾಗಿದ್ದು ಕಬಡ್ಡಿಯಲ್ಲಿ ಇದೊಂದು ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದರು.
ಕಬಡ್ಡಿ ಭಾರತದ ಮಣ್ಣಿನ ಆಟ: ಅತಿಥಿಗಳಾಗಿ ಪಾಲ್ಗೊಂಡಿದ್ದ ವರ್ತಕರ ಕಾಲೇಜು ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಹಳ್ಳಿಯ ಜನರ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಕಬಡ್ಡಿ ಕೂಡ ಒಂದು, ಪ್ರತಿಯೊಬ್ಬ ವ್ಯಕ್ತಿ ಶಾಲಾ ದಿನಗಳಲ್ಲಿ ಕಬಡ್ಡಿ ಕ್ರೀಡೆಯಲ್ಲಿ ತೊಡಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಕೇವಲ ಬಡ ಕುಟುಂಬದ ಹಿನ್ನೆಲೆಯುಳ್ಳವರು ಆಡುತ್ತಿದ್ದ ಕ್ರೀಡೆಯನ್ನು ಇತ್ತೀಚೆಗೆ ಉಳ್ಳವರ ಮಕ್ಕಳೂ ಸಹ ಇಷ್ಟಪಡುತ್ತಿದ್ದಾರೆ ಎಂದರು.ಸಾವಿನಲ್ಲೂ ಗೌರವ ಸೂಚಕವಿರಬೇಕು:ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಡಾ. ನೀಲೇಶ ಮಾತನಾಡಿ, ಎಚ್ಐವಿ ಸೋಂಕಿತರು ಕುಟುಂಬ ಸಮಾಜ ಹಾಗೂ ದೇಶಕ್ಕೆ ಬೇಡವಾಗುತ್ತಿದ್ದಾರೆ. ಹುಟ್ಟಿದ ಮನುಷ್ಯ ಸಾಯಲೇಬೇಕು, ಆದರೆ ಸಾವಿನಲ್ಲೂ ಹೆಂಡತಿ ಮಕ್ಕಳು ಕುಟುಂಬ ಸಮಾಜ ಪರಸ್ಪರ ಗೌರವದಿಂದ ನಮ್ಮನ್ನು ಕಾಣಬೇಕು, ಸುರಕ್ಷಿತ ಲೈಂಗಿಕ ಕ್ರಿಯೆಗಳಲ್ಲಿ ಪಾಲ್ಗೊಂಡು ಎಚ್ ಐವಿಯಂತಹ ಮಾರಣಾಂತಿಕ ರೋಗಗಳಿಂದ ದೂರವಿರುವಂತೆ ಸಲಹೆ ನೀಡಿದರು.
ಪ್ರತಿಯೊಬ್ಬರೂ ಆಡಿದ್ಧಾರೆ ಕಬಡ್ಡಿ:ವೈದ್ಯಾಧಿಕಾರಿ ಡಾ. ಪುಟ್ಟರಾಜು ಮಾತನಾಡಿ, ಕಬಡ್ಡಿ ಕ್ರೀಡೆ ಆಡುವುದರಿಂದ ಸ್ಥಿರವಾದ ಆರೋಗ್ಯ ಸೇರಿದಂತೆ ದೈಹಿಕ ಸಾಮರ್ಥ್ಯ ಶಕ್ತಿ, ಚುರುಕುತನ ಸಹಿಷ್ಣುತೆ ಉತ್ತೇಜಿಸಲು ಸಹಾಯ ಮಾಡಲಿದೆ, ರಕ್ತದ ಪರಿಚಲನೆ ಹೆಚ್ಚಿಸಲಿದ್ದು ಮಾನಸಿಕ ದೃಢತೆ ಸ್ಥಿತಿ ಸ್ಥಾಪಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.ಹಾನಗಲ್ಲ ಕಾಲೇಜು ಪ್ರಥಮ: ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ 12 ಕಾಲೇಜುಗಳು ಪಾಲ್ಗೊಂಡಿದ್ದು, ಹಾನಗಲ್ಲನ ಶ್ರೀ ಕುಮಾರೇಶ್ವರ ಕಾಲೇಜು ಪ್ರಥಮ ಸ್ಥಾನ ಹಾಗೂ ಬ್ಯಾಡಗಿಯ ಬಿಇಎಸ್ಎಂ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬೆಸ್ಟ್ ರೈಡರ್ ಭರತಕುಮಾರ, ಡಿಫೆಂಡರ್ ವಿರೇಶ ಮುಗದೂರು ಬೆಸ್ಟ್ ಆಲ್ ರೌಂಡರ್ ಮನು ಮೈಲಾರ ವೈಯಕ್ತಿಕ ಪ್ರಶಸ್ತಿಗಳಿಗೆ ಭಾಜನರಾದರು.
ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ.ಚಕ್ರಸಾಲಿ ಅಧ್ಯಕ್ಷತೆ ವಹಿಸಿದ್ದರು. ಕಬಡ್ಡಿ ಸಂಸ್ಥೆ ಗೌರವಾಧ್ಯಕ್ಷ ಗಂಗಣ್ಣ ಎಲಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಹಿರಿಯ ಆಟಗಾರ ಗಿರೀಶಗೌಡ ಪಾಟೀಲ, ಟಿಎಚ್ಓ ಡಾ.ಕಾಂತೇಶ ಭಜಂತ್ರಿ, ಬಿಇಎಸ್ ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ, ಉಪನ್ಯಾಸಕರಾದ ಸುರೇಶ ಪಾಂಗಿ, ಪ್ರಭು ದೊಡ್ಮನಿ, ಹಿರಿಯ ಕ್ರೀಡಾಪಟುಗಳಾದ ಜಿನ್ನಾ ಹಲಗೇರಿ, ಶಿವಣ್ಣ ಜಂಗರಡ್ಡೇರ, ರವಿ ಶೆಟ್ಟಿ, ಪ್ರಕಾಶ ತಾವರಗಿ, ವಿಜಯ ಮಾಳಗಿ, ಬಸವರಾಜ ಸೊಟ್ಟೇರ, ಕೋಚ್ ಮಂಜುಳ ಭಜಂತ್ರಿ, ಪುನೀತ್, ಮಲ್ಲೇಶ ಭಂಡಾರಿ, ಅಮಾನ್ ಹಲಗೇರಿ, ತೀರ್ಪುಗಾರರಾದ ವಿ.ಆರ್. ಬಾಸೂರ, ರಮೇಶ ಕರಬಣ್ಣವರ, ಬಿ.ಸಿ.ದಾಣ್ಗಲ್, ಬಸವರಾಜ ಹೊಸಪೇಟಿ, ಎಂ.ಎಸ್. ಹೊಸ್ಮನಿ, ಕುಮಾರಸ್ವಾಮಿ ನವೀನ, ನಾಗರಾಜ ಮೆಡ್ಲೇರಿ, ಮಹಾಂತೇಶ, ಬಸವರಾಜ್ ಇನ್ನಿತರರಿದ್ದರು.