ವಾರದಲ್ಲಿ ಗುಂಡಿ ಮುಚ್ಚುವ ಭರವಸೆ: ಪ್ರತಿಭಟನೆ ಹಿಂದಕ್ಕೆ

KannadaprabhaNewsNetwork |  
Published : Apr 13, 2026, 02:00 AM IST
ರಸ್ತೆ ತಡೆ ನಡೆಸಿ ತಮ್ಮ ಬೇಡಿಕೆಗಳ ಮನವಿ ಓದುತ್ತಿರುವ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ.ಪಾಟೀಲ | Kannada Prabha

ಸಾರಾಂಶ

ಸಾಗರಮಾಲಾ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದ ಗುತ್ತಿಗೆದಾರರೇ ರಸ್ತೆ ಕೆದರಿ ಇನ್ನಷ್ಟು ತಗ್ಗು ಮಾಡಿ ತಿಂಗಳುಗಳೇ ಕಳೆದಿವೆ.

ಹಾನಗಲ್ಲ: ಹಾನಗಲ್ಲ- ಹಾವೇರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿನ ಅಪಾಯಕಾರಿ ಗುಂಡಿ ಮುಚ್ಚುವುದು, ಅಕ್ಕಿಆಲೂರು ಬಸ್ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಗಟಾರದ ನೀರು ನಿಲ್ಲುವುದನ್ನು ತಪ್ಪಿಸುವುದಕ್ಕೆ ಸರ್ಕಾರಕ್ಕೆ ಹಾಗೂ ಸಾಗರಮಾಲಾ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾಕ್ಕೆ ಮಾಡಿದ ಮನವಿ ವಿಫಲವಾಗಿರುವುದರಿಂದ ಜೆಡಿಎಸ್ ತಾಲೂಕು ಘಟಕ ಎರಡು ಗಂಟೆಗಳ ಕಾಲ ರಸ್ತೆತಡೆ ನಡೆಸಿ, ಪ್ರತಿಭಟಿಸಿದರು.ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಿಂದ ಹಾವೇರಿವರೆಗೆ ರಾಜ್ಯ ಹೆದ್ದಾರಿಯಲ್ಲಿ ನೂರಾರು ಕಡೆಗಳಲ್ಲಿ ತಗ್ಗುಗಳು ಬಿದ್ದಿರುವುದು ಒಂದು ಭಾಗವಾದರೆ, ಇನ್ನೊಂದೆಡೆ ತಗ್ಗು ಮುಚ್ಚಲು ಸಾಗರಮಾಲಾ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದ ಗುತ್ತಿಗೆದಾರರೇ ರಸ್ತೆ ಕೆದರಿ ಇನ್ನಷ್ಟು ತಗ್ಗು ಮಾಡಿ ತಿಂಗಳುಗಳೇ ಕಳೆದಿವೆ.

ಇವನ್ನು ಮುಚ್ಚುವ ವ್ಯವಧಾನ ಇಲಾಖೆಗಿಲ್ಲ. ಈ ತಗ್ಗುಗಳಲ್ಲಿ ವಾಹನಗಳೂ ಇಳಿದು ಜಖಂ ಆಗುವುದು, ತಗ್ಗು ತಪ್ಪಿಸಲು ಹೋಗಿ ಅಪಘಾತಗಳಾಗುವುದು ಸೇರಿದಂತೆ ಈ ರಸ್ತೆ ಓಡಾಟಕ್ಕೆ ಮಾರಕವಾಗಿದೆ. ಇದನ್ನು ಸರಿಪಡಿಸಲು ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಿ ಏನೂ ಪ್ರಯೋಜನವಾಗಿಲ್ಲ.ಇನ್ನು ಅಕ್ಕಿಆಲೂರು ಬಸ್‌ ನಿಲ್ದಾಣದ ಅನತಿ ದೂರದ ಅಕ್ಕಿಆಲೂರು ಹಾನಗಲ್ಲ ರಸ್ತೆಯಲ್ಲಿ ಗಟಾರದ ನೀರು ನಿಲ್ಲುತ್ತಿದ್ದು, ಇದು ಹಲವು ವರ್ಷಗಳ ಸಮಸ್ಯೆಯಾದರೂ ಇಲಾಖೆ ಕಣ್ಣು ತೆರೆಯುತ್ತಿಲ್ಲ. ಮಳೆ ಬಂದರೆ ವಾಹನಗಳ ಓಡಾಟವೇ ದುಸ್ತರವಾಗುತ್ತಿದೆ. ಇದಕ್ಕಾಗಿ ಕಳೆದ ವರ್ಷವೂ ಹೋರಾಡಿ ರಸ್ತೆತಡೆ ಮಾಡಿದ್ದರೂ ಇಲಾಖೆ ಕಣ್ಣು ತೆರೆದಿಲ್ಲ. ಸಾರ್ವಜನಿಕರ ಬಗೆಗೆ ಕಿಂಚಿತ್ತೂ ಕಳಕಳಿ ಇಲ್ಲದ ಅಧಿಕಾರಿಗಳೂ ಜಾಣಕುರುಡು ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರದ ಕಣ್ಣು ತೆರೆಸಲು ಅನಿರ್ದಿಷ್ಟ ಅವಧಿ ವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಬಿ. ಪಾಟೀಲ, ರಸ್ತೆ ದುರಸ್ತಿಗೆ ಸರ್ಕಾರದಲ್ಲಿ ಹಣವಿಲ್ಲವೋ, ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿವೆಯೋ, ಜನಪ್ರತಿನಿಧಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲವೋ ಎಂಬುದು ತಿಳಿಯುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಕಂಡು ಕಾಣದಂತಿರುವ ಜನಪ್ರತಿನಿಧಿಗಳು, ಅಧಿಕಾರಿಗಳ ಉದ್ದೇಶವೇ ಅರ್ಥವಾಗುತ್ತಿಲ್ಲ. ಹಲವು ತೊಂದರೆಗಳಿಗೆ ಬೇಸತ್ತು ಹೋದ ಸಾರ್ವಜನಿಕರು ಏನೂ ಮಾತನಾಡಲಾರದ ಸ್ಥಿತಿ ತಲುಪಿದ್ದಾರೆ. ಪ್ರತಿಭಟನೆ ನಡೆಸಿ, ಪತ್ರ ಬರೆದು, ಮುಖತಃ ಕಂಡು ರಸ್ತೆ ದುರಸ್ತಿಗೆ ಹೇಳಿದರೂ ಕ್ಯಾರೆ ಅನ್ನದ ಅಧಿಕಾರಿಗಳಿಗೆ ಸರ್ಕಾರ ಅಥವಾ ಶಾಸಕ ಮಂತ್ರಿಗಳ ಭಯವಿಲ್ಲ. ಜನಪ್ರತಿನಿಧಿಗಳಿಗೆ ಜನರ ಭಯವಿಲ್ಲ ಎಂದು ಸಾಬೀತಾಗುತ್ತಿದೆ. ಈಗ ಕೂಡಲೇ ರಸ್ತೆ ದುರಸ್ತಿಗೊಳಿಸುವ ಅಧಿಕೃತ ಪತ್ರ ನೀಡಿರುವ ಸಾಗರಮಾಲಾ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಇಲಾಖೆಗೆ ಒಂದು ವಾರದ ಗಡುವಿನಲ್ಲಿ ದುರಸ್ತಿ ಪೂರ್ಣಗೊಳಿಸಲು ಪತ್ರ ತೆಗೆದುಕೊಂಡು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ ಎಂದರು.ಹಾನಗಲ್ಲ ಪಿಎಸ್‌ಐ ಸಂಪತ್ತಕುಮಾರ ಆನಿಕಿವಿ, ಸಾಗರಮಾಲಾ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದ ಎಂ.ಎಸ್. ಖಾನ, ಎಂಜಿನಿಯರ್ ರಾಘವೇಂದ್ರ ಸ್ಥಳಕ್ಕೆ ಆಗಮಿಸಿ ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮೂಕಪ್ಪ ಪಡೆಪ್ಪನವರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ ಸಮನಳ್ಳಿ, ಜಿಲ್ಲಾ ಅಂಗವಿಕಲ ಘಟಕದ ಗೌಸಮೊದ್ದೀನ ಆಲದಕಟ್ಟಿ, ನಂದೀಶ ಕ್ಷೌರದ, ಸೋಮಣ್ಣ ನೀರಲಗಿ, ಬಸವರಾಜ ಬಾಳಿಹಳ್ಳಿ, ರಾಜು ತಳವಾರ, ಜಬಿವುಲ್ಲಾ ಖತೀಬ, ಹರೀಶ ಅಕ್ಕಿಆಲೂರ ಮೊದಲಾದ ಮುಖಂಡರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಕಿಯು ನಾಶ ಸೂಚಿಸಿದರೆ ಮಳೆಯು ಸೃಷ್ಟಿ ಸೂಚಿಸುತ್ತದೆ: ಡಾ. ಬಿ.ಎಂ. ಪುಟ್ಟಯ್ಯ
ಯೋಗ, ಪ್ರಾಣಾಯಾಮದಿಂದ ಮಾನಸಿಕ ಸದೃಢತೆ: ಎಸ್‌ಪಿ ಜಾಹ್ನವಿ