ಅನ್ನ ಹಾಗೂ ಅಕ್ಷರ ತೋರಿಸಿದ ಸಮಾಜವಾದ ಹಬ್ಬು ಬ್ರಾಹ್ಮಣರ ಕುರಿತು ಎಲ್ಲ ದಾಖಲೆ ಪರಿಶೀಲಿಸಿ ನಮ್ಮಲ್ಲಿ ಯಾವುದೆ ಗೊಂದಲ ಇರದ ಹಾಗೆ ಆರ್.ಎಸ್. ಹಬ್ಬು ಕೃತಿ ನೀಡಿದ್ದಾರೆ.
ಹಬ್ಬು ಸಮಾಜ ಹೊರಗಿಟ್ಟಿದ್ದಕ್ಕೆ ಹವ್ಯಕ ಮಹಾಸಭೆ ಕ್ಷಮೆ ಕೇಳಲಿ: ಹಾಸ್ಯಗಾರಹಬ್ಬು ಸಮುದಾಯ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆ
ಕನ್ನಡಪ್ರಭ ವಾರ್ತೆ ಕಾರವಾರಅನ್ನ ಹಾಗೂ ಅಕ್ಷರ ತೋರಿಸಿದ ಸಮಾಜವಾದ ಹಬ್ಬು ಬ್ರಾಹ್ಮಣರ ಕುರಿತು ಎಲ್ಲ ದಾಖಲೆ ಪರಿಶೀಲಿಸಿ ನಮ್ಮಲ್ಲಿ ಯಾವುದೆ ಗೊಂದಲ ಇರದ ಹಾಗೆ ಆರ್.ಎಸ್. ಹಬ್ಬು ಕೃತಿ ನೀಡಿದ್ದಾರೆ ಎಂದು ಪರಿಸರ ತಜ್ಞ, ಲೇಖಕ ಶಿವಾನಂದ ಕಳವೆ ಅಭಿಪ್ರಾಯಪಟ್ಟರು. ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಆರ್.ಎಸ್.ಹಬ್ಬು ಅವರ ಹಬ್ಬು ಸಮುದಾಯ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಕೃಷಿ ಬಿಟ್ಟು ಇಡಿ ಹವ್ಯಕ ತಲೆಮಾರು ನಗರದಲ್ಲಿ ಕಳೆದುಹೋದ ಕಾಲದಲ್ಲಿ ನಾವಿದ್ದೇವೆ. ಮೊದಲು ಕೃಷಿ ಆರಂಭಿಸಿದ ಒಂದು ಸಮುದಾಯದ ಕುರಿತು ಈಗ ಕೃತಿ ಬಂದಿದೆ. ಹಬ್ಬು ಸಮುದಾಯ ಜೊತೆ ತುಂಬ ಒಡನಾಟ ನಮಗಿದೆ. ಅಕ್ಷರ ಮತ್ತು ಅನ್ನ ತೋರಿಸಿದ ಸಮುದಾಯ ಎಂದರೆ ಹಬ್ಬು ಬ್ರಾಹ್ಮಣರು ಎಂದು ಅವರು ತಿಳಿಸಿದರು. ನಾವು ಜಗತ್ತನ್ನು ಓದುತ್ತೇವೆ. ಆದರೆ ನಮ್ಮ ನೆಲದ ಬಗ್ಗೆ ಓದುವುದಿಲ್ಲ. ಅನ್ನದ ಒಳಗಿನ ಸತ್ಯ ಅರ್ಥವಾಗಬೇಕಾದರೆ ಕಾರವಾರದ ಹಬ್ಬುವಾಡಕ್ಕೆ ಬರಬೇಕು ಎಂದರು. ಹಬ್ಬು ಸಮುದಾಯ ಕಡಿಮೆ ಆಗುತ್ತಿದೆ. ವಯಸ್ಸಾದವರು ಮಾತ್ರ ಹಳ್ಳಿಗಳಲ್ಲಿ ಇದ್ದಾರೆ ಎನ್ನುತ್ತಾರೆ. ಆದರೆ ಎಲ್ಲ ಸಮುದಾಯದಲ್ಲೂ ಇದೇ ಕತೆ ಇದೆ. ಕಾಲದ ಕೊಂಡಿಗಳು ಕಳಚುತ್ತಿದೆ. ಹಬ್ಬು ಬ್ರಾಹ್ಮಣ ಸಮಾಜದವರು ಮಾಧ್ಯಮ, ಶಿಕ್ಷಣ, ಕೃಷಿ, ಎಲ್ಲೆಡೆ ಕೆಲಸ ಮಾಡಿದ್ದಾರೆ. ಇವರ ಸಂಖ್ಯೆ ಕಡಿಮೆಯಾದರೂ ಗುಣಮಟ್ಟದಲ್ಲಿ ಕೊರತೆ ಇಲ್ಲ ಎಂದು ಪ್ರಶಂಸಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ, ಲೇಖಕ ಅಶೋಕ ಹಾಸ್ಯಗಾರ, ಹಬ್ಬು ಸಮುದಾಯ ಜನಗಣತಿಯಲ್ಲಿ ಹಬ್ಬು ಎಂದು ದಾಖಲಿಸಬೇಕು . ಹಬ್ಬು ಸಮುದಾಯ ಶಿಕ್ಷಣ ಮತ್ತು ಕೃಷಿಯಲ್ಲಿ ತೊಡಗಿಕೊಂಡವರಾಗಿರುವುದರಿಂದ ಹಬ್ಬು ಸಮುದಾಯದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿಗೆ ಪದಕಗಳನ್ನು ನೀಡುವಂತಾಗಬೇಕು. ಹಬ್ಬುವಾಡ, ಹಬ್ಬುಚಿಟ್ಟೆ ಈ ಹೆಸರನ್ನು ಕಾಪಾಡಿಕೊಳ್ಳಲು ಸ್ಥಳೀಯ ಸಂಸ್ಥೆಗಳಲ್ಲಿ ದಾಖಲಿಸಬೇಕು ಎಂದರು. ಹಬ್ಬು ಸಮಾಜವನ್ನು ಹೊರಗಿಟ್ಟಿದ್ದು ಯಾವುದೋ ಕಾಲಘಟ್ಟದಲ್ಲಿ ತಪ್ಪಾಗಿದೆ ಎಂದು ಹವ್ಯಕ ಮಹಾಸಭೆ ಕ್ಷಮಾಪಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.ಆರ್.ಎಸ್. ಹಬ್ಬು ಕೃತಿಯ ಕುರಿತು ಮಾಹಿತಿ ನೀಡಿದರು. ಎಂ.ಎಸ್. ಹಬ್ಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೋಧಾ ಹೆಗಡೆ ಸ್ವಾಗತಿಸಿದರು. ರಜತ ಹಬ್ಬು ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.