ರೈತರ ಎಲ್ಲ ಬೇಡಿಕೆ ಈಡೇರಿಸುವ ಭರವಸೆ

KannadaprabhaNewsNetwork |  
Published : May 24, 2026, 03:00 AM IST
ಅಂತ್ಯ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ನನೆಗುದಿಗೆ ಬಿದ್ದಿರುವ ಹಾಗೂ ಹೊಸ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸುವ ಮೂಲಕ ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿಗೆ ಆಗ್ರಹಿಸಿ ರೈತರು ಕಳೆದ ನಾಲ್ಕು ದಿನಗಳಿಂದ ಹುಕ್ಕೇರಿಯಲ್ಲಿ ನಡೆಸಿದ ಧರಣಿ ಸತ್ಯಾಗ್ರಹ ಶನಿವಾರ ಅಂತ್ಯಗೊಂಡಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ನನೆಗುದಿಗೆ ಬಿದ್ದಿರುವ ಹಾಗೂ ಹೊಸ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸುವ ಮೂಲಕ ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿಗೆ ಆಗ್ರಹಿಸಿ ರೈತರು ಕಳೆದ ನಾಲ್ಕು ದಿನಗಳಿಂದ ಹುಕ್ಕೇರಿಯಲ್ಲಿ ನಡೆಸಿದ ಧರಣಿ ಸತ್ಯಾಗ್ರಹ ಶನಿವಾರ ಅಂತ್ಯಗೊಂಡಿದೆ.

ಧರಣಿ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ ನೀಡಿರುವ ಭರವಸೆಗಳ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಹೋರಾಟ ಹಿಂಪಡೆದರು. ಕಳೆದ ಮೂರು ದಿನಗಳಿಂದ ಇಲ್ಲಿನ ಕೋರ್ಟ್‌ ಸರ್ಕಲ್‌ನಲ್ಲಿ ರೈತರು, ತಮ್ಮ ನೀರಾವರಿ ಯೋಜನೆಗಳ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಹೋರಾಟವನ್ನು ಸಂಕೇಶ್ವರ ಮತ್ತು ಯಮಕನಮರಡಿವರೆಗೂ ವಿಸ್ತರಿಸಿ ಶನಿವಾರ ಈ ಎರಡು ಪಟ್ಟಣಗಳ ಬಂದ್‌ಗೆ ಕರೆ ನೀಡಿದ್ದರು.

ಹೋರಾಟ ತೀವ್ರ ಸ್ವರೂಪ ಪಡೆಯುತ್ತಿರುವುದನ್ನು ಅರಿತ ಸಿಎಂ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ನಿಖಿಲ್ ಕತ್ತಿ ಅವರ ನಿರ್ದೇಶನದ ಮೇರೆಗೆ ಧರಣಿ ನಿರತ ಸ್ಥಳಕ್ಕೆ ಧಾವಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ, ರೈತರ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಬರುವ ಒಂದೆರೆಡು ತಿಂಗಳಲ್ಲಿ ಪೂರ್ಣಗೊಳಿಸುವ ಆಶ್ವಾಸನೆ ನೀಡಿದರು. ಈ ಹಿನ್ನಲೆಯಲ್ಲಿ ಹೋರಾಟವನ್ನು ಕೈಬಿಡಲಾಯಿತು.

ಇಲ್ಲಿನ ಕೋರ್ದ್‌ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆದರೂ, ಉಳಿದೆಡೆ ವಾಹನ ಸಂಚಾರ, ವಾಣಿಜ್ಯ ವಹಿವಾಟು ಎಂದಿನಂತೆ ನಡೆದವು. ಕೆಲವೆಡೆ ಬೆಳಗ್ಗೆ ಅಂಗಡಿ ಮುಂಗಟ್ಟುಗಳು ಮುಚ್ಚಿದ ಸ್ಥಿತಿಯಲ್ಲಿ ಕಂಡುಬಂದವಾದರೂ ಮಧ್ಯಾಹ್ನದ ಹೊತ್ತಿಗೆ ವಹಿವಾಟು ಎಂದಿನಂತೆ ಪ್ರಾರಂಭವಾಯಿತು. ಖಾಸಗಿ ಮತ್ತು ಸರಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯ ವಾಹನಗಳ ಸಂಚಾರ, ವಿವಿಧ ವಾಣಿಜ್ಯ ವಹಿವಾಟುಗಳ ಸೇವೆಯಲ್ಲಿ ವ್ಯತ್ಯಯ ಕಂಡು ಬರಲಿಲ್ಲ. ವಾಹನ ಸವಾರರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಿದರು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಆಯಕಟ್ಟಿನ ಮತ್ತು ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಣಸಿಕೊಳ್ಳಮಠದ ಸಿದ್ಧಬಸವ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರರು ಉಪಸ್ಥಿತರಿದ್ದರು. ಧರಣಿ ಸ್ಥಳಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸಿ, ನೀರಾವರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ಹುಕ್ಕೇರಿ ತಾಲೂಕಿನಲ್ಲಿಯೇ ಎರಡು ಜಲಾಶಯ, ಮೂರು ನದಿಗಳು ಹರಿದಿದ್ದರೂ ಇಲ್ಲಿನ ಬಹುತೇಕ ಪ್ರದೇಶದ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ. ಇಲ್ಲಿನ ಹಿಡಕಲ್ ಜಲಾಶಯದಿಂದ ವಿಜಯಪುರ, ಬಾಗಲಕೋಟೆವರೆಗೂ ನೀರು ಪೂರೈಕೆಯಾಗುತ್ತಿದೆ. ಆದರೆ, ತಾಲೂಕಿನ ಕೆಲ ಭಾಗದ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ಇಲ್ಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದರು.

ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯುತ್ತಿರುವ ನೀರಾವರಿ ಯೋಜನೆಯನ್ನು ಸ್ಥಗಿತಗೊಳಿಸಬೇಕು. ಈ ಯೋಜನೆಯ ಮೂಲಕ ರಾಜ್ಯದ ನೀರಾವರಿ ಸಚಿವರು ಈ ಭಾಗದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಯೋಜನೆ ಅನುದಾನವನ್ನು ಹುಕ್ಕೇರಿ ತಾಲೂಕಿನ ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

--- ಬಾಕ್ಸ್ ---

ಶೀಘ್ರವೇ ವಿಸ್ತೃತ ವರದಿ: ಅಮ್ಮಿನಬಾವಿ

ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ ಮಾತನಾಡಿ, ಹುಕ್ಕೇರಿ ತಾಲೂಕಿನ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಶೀಘ್ರವೇ ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಲು ಸ್ವಾಮೀಜಿಗಳ ನೇತೃತ್ವದ ನಿಯೋಗಕ್ಕೆ ಅವಕಾಶ ಮಾಡಿಕೊಡಲಾಗುವುದು. ಹಳೆ ಮತ್ತು ಹೊಸ ನೀರಾವರಿ ಯೋಜನೆಗಳ ಸ್ಥಳಗಳಿಗೆ ರವಿವಾರವೇ ಭೇಟಿ ನೀಡಿ ಪರಿಶೀಲಿಸಿ, ವಿಸ್ತೃತ ವರದಿ ಸಿದ್ಧಪಡಿಸಲಾಗುವುದು. ಅಡವಿಸಿದ್ದೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದ್ದು, ಶೀಘ್ರವೇ ಆರಂಭಿಸಲಾಗುವುದು. ಕೊಟಬಾಗಿ, ಕುರಣಿ, ಕೋಚರಿ, ದಡ್ಡಿ-ನಾಗನೂರ, ಯೋಜನೆಗಳ ನಿರ್ವಹಣೆಗೆ ಅಗತ್ಯ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಮಲ್ಲಿಕಾರ್ಜುನ, ಶಿಪ್ಪೂರ-ಹಡಲಗಾ, ಹತ್ತರಗಿ-ಗುಡಗನಟ್ಟಿ ಯೋಜನೆಗಳಿಗೆ ಮರು ವರದಿ ಸಿದ್ಧಪಡಿಸಲಾಗುವುದು ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಲಾದಷ್ಟು ಸಹಾಯ ಮಾಡಲು ಸಂಕಲ್ಪ ಮಾಡಿ: ಶಾಸಕ ಕಟಕಧೊಂಡ
ಸಾಲಹಳ್ಳಿಯಲ್ಲಿ ನಾಳೆ ಗುರ್ಲಾಪುರ ಮಾದರಿ ಹೋರಾಟ?