ಕನ್ನಡಪ್ರಭ ವಾರ್ತೆ ಸುರಪುರ
ಪ್ರತಿಯೊಬ್ಬ ಸ್ಥಳೀಯ ಮಟ್ಟದ ಅಧಿಕಾರಿಗಳು ಅಂತರ್ಜಾಲ, ವಾಟ್ಸಪ್, ಫೇಸ್‌ಬುಕ್, ಇನ್ಸ್ ಟ್ರಾಗ್ರಾಂ, ಭಿತ್ತಿಪತ್ರ, ಧ್ವನಿಪ್ರಚಾರದ ಮೂಲಕ ಫೆ.16 ರಿಂದ 23ರವರೆಗೆ ಸುರಪುರ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಬರುವ ಬಗ್ಗೆ ಸಮಾಜದಲ್ಲಿ ಪ್ರಚಾರ ಮಾಡಬೇಕು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಹೇಳಿದರು.ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ಜಾರಿಗೊಂಡು 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂವಿಧಾನದ ಮಹತ್ವವವನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾಲ ಕೂಡಿಬಂದಿದೆ. ಆದ್ದರಿಂದ ಸಂವಿಧಾನ ಅರಿವು ಮತ್ತು ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಬೇಕು ಎಂದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಎಸ್‌ಡಿಎ, ಗ್ರಂಥಪಾಲಕರು, ಎನ್‌ಆರ್‌ಎಲ್‌ಎಂ ಕೋ ಆಡಿನೇಟರ್ ಸೇರಿದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಸ್ಥಳೀಯವಾಗಿ ಇರುವ ಅಧಿಕಾರಿಗಳು ಜಾಥಾ ಬರುವ ವಿಷಯವನ್ನು ಸೈಕಲ್ ಜಾಥಾ, ಎತ್ತಿನಗಾಡಿ ಜಾಥಾ, ಬೈಕ್ ರ‍್ಯಾಲಿ, ಶಾಲಾ ವಿದ್ಯಾರ್ಥಿಗಳಿಂದ ಪ್ರಭೇತ್ ಪೇರಿ ಮೂಲಕ ಪ್ರಚುರ ಪಡಿಸಬೇಕು. ಇದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಯಾವುದೇ ಒಂದು ಕಾರ್ಯಕ್ರಮ ಯಶಸ್ಸಿಗೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಾಗ ಮಾತ್ರ ಸಾಧ್ಯವಾಗುತ್ತದೆ. ಆದರೆ, ಸುರಪುರದಲ್ಲಿ ಮಾತ್ರ ಫೆ.16ರಂದು ಕಕ್ಕೇರಾದಲ್ಲಿ ಸ್ವಾಗತಿಸಲು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಕೆಂಭಾವಿ ಹೋಬಳಿ ಕೇಂದ್ರ, ಸುರಪುರ ನಗರ ಕೇಂದ್ರದಲ್ಲಿ ಮಾತ್ರ ತಾಲೂಕು ಅಧಿಕಾರಿಗಳು ಪಾಲ್ಗೊಂಡು ಬೀಳ್ಕೊಡುತ್ತೇವೆ. ಎಲ್ಲ ಗ್ರಾಪಂಗಳಲ್ಲಿ ಸಂಚರಿಸುವಾಗ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಭೆ ಇರುತ್ತವೆ. ಅಲ್ಲಿಗೆ ಹೋಗಬೇಕಿದೆ. ಸಮಾಜ ಕಲ್ಯಾಣ ಅಧಿಕಾರಿಗಳ ಜತೆ ಸ್ಥಳೀಯ ಮಟ್ಟದ ಅಧಿಕಾರಿಗಳು ಇರುತ್ತಾರೆ ಎಂದು ತಾಪಂ ಅಧಿಕಾರಿ ತಿಳಿಸಿದರು.
ಸಮಾಜ ಕಲ್ಯಾಣಾಧಿಕಾರಿ ಡಾ. ಶೃತಿ, ಪಿಡಿಓಗಳಾದ ರಾಜಕುಮಾರ, ದುರ್ಗಮ್ಮ ಮೊಕಾಶಿ, ಸಂಗೀತ ಸಜ್ಜನ್, ಬಲಭೀಮರಾವ ಕುಲಕರ್ಣಿ, ಸತೀಶ ಅಲಗೂರು, ಶ್ರೀಶೈಲ ಹಳ್ಳಿ ಸೇರಿದಂತೆ ಇತರರಿದ್ದರು.