ಜಿಲ್ಲಾಧಿಕಾರಿ ಸೂಚನೆ, ಮೇಲ್ವಿಚಾರಣೆ, ಉಸ್ತುವಾರಿ ಸಮಿತಿ ಸಭೆ
ಜಿಲ್ಲೆಯ ರೈತ ಉತ್ಪಾದಕರ ಸಂಸ್ಥೆಗಳಿಗೆ ಡಿಜಿಟಲ್ ಮಾರುಕಟ್ಟೆ ಮೂಲಕ ವ್ಯವಹರಿಸುವಂತೆ ಉತ್ತೇಜಿಸಬೇಕು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ರಚಿತವಾದ ರೈತ ಉತ್ಪಾದಕ ಸಂಸ್ಥೆಗಳಿಗೆ 3 ತಿಂಗಳ ಸ್ಯಾಚುರೇಷನ್ ಡ್ರೈವ್ ಕುರಿತು ಕೃಷಿ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರನ್ನು ಗುರುತಿಸಿ ಸಂಘಟನೆ ಮೂಲಕ ಅಗತ್ಯ ಮಾರುಕಟ್ಟೆ ಸೌಲಭ್ಯ, ಕೃಷಿ ಪರಿಕರಗಳ ಸ್ಥಳೀಯ ಲಭ್ಯತೆ, ಕೃಷಿ ಉತ್ಪನ್ನ ಸಂಸ್ಕರಣೆ, ಬೆಳೆಗಳ ಮೌಲ್ಯವರ್ಧನೆ, ಉಪ ಉತ್ಪನ್ನಗಳ ತಯಾರಿಕೆ ಮೂಲಕ ಮತ್ತಷ್ಟು ಲಾಭ ತಂದುಕೊಡುವುದು. ಕೃಷಿಕರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸದೃಢವಾಗಿಸುವ, ಉತ್ಪಾದನೆಯನ್ನು ವೃದ್ಧಿಗೊಳಿಸಿ ರೈತರ ಆದಾಯ ಹೆಚ್ಚಿಸುವ ಮುಖ್ಯ ಉದ್ದೇಶದಿಂದ ವಿವಿಧ ಯೋಜನೆಗಳಡಿ ರೈತ ಉತ್ಪಾದಕರ ಸಂಸ್ಥೆ ರಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ರಚಿಸಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಮಿಷನ್ ಮಾದರಿಯಲ್ಲಿ (3 ತಿಂಗಳ ಸ್ಯಾಚುರೇಶನ್ ಡ್ರೈವ್) ಶಿಬಿರ ಕೈಗೊಂಡು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಮಾರುಕಟ್ಟೆ, ಎಪಿಎಂಸಿ ಮಂಡಿ ಮತ್ತು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಘ (ಎಫ್.ಎಸ್.ಎಸ್.ಎ.ಐ.) ಪರವಾನಗಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಉಪಸ್ಥಿತರಿದ್ದರು.