ಪಿಎಂ 15 ಅಂಶಗಳ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ನಿತೇಶ

KannadaprabhaNewsNetwork |  
Published : Jan 21, 2024, 01:30 AM IST
ಬೆಳಗಾವಿ | Kannada Prabha

ಸಾರಾಂಶ

ಅಲ್ಪಸಂಖ್ಯಾತರ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ತರಬೇತಿ ನೀಡಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಪ್ರಧಾನಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ವಿನಾಕಾರಣ ನೆಪವೊಡ್ಡದೆ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು. ಅಲ್ಪಸಂಖ್ಯಾತರ ಸಮುದಾಯಕ್ಕೆ ಶಿಕ್ಷಣ, ಕೌಶಲ್ಯ ಹಾಗೂ ಇತರೆ ಉದ್ಯೋಗಗಳಿಗೆ ತರಬೇತಿ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ವಿವಿಧ ಯೋಜನೆಗಳನ್ನು ಅರ್ಹರಿಗೆ ಸುಲಭ ರೀತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದ ಅವರು, ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ನೀಡಬೇಕಾದರೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಬೇಕು. ಇದರಿಂದ ಹೆಚ್ಚಿನ ಇಲಾಖಾ ಯೋಜನೆಗಳು ಪ್ರಚಾರವಾಗಲಿವೆ. ಅದರಂತೆ ಉಸ್ತುವಾರಿ ಸಚಿವರ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಚಿವರ ಮೂಲಕ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಸೂಚಿಸಿದರು.

ಅಧಿಕಾರಿಗಳಿಗೆ ನೋಟಿಸ್ ಜಾರಿ:

ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹೆಸ್ಕಾಂ ಚಿಕ್ಕೋಡಿ ವಿಭಾಗ ಸೇರಿದಂತೆ ಕೆಲವು ಇಲಾಖೆಯ ಅಧಿಕಾರಿಗಳು ಸಭೆಗಳಿಗೆ ಹಾಜರಾಗುತ್ತಿಲ್ಲ. ಅಂತಹ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಲು ಡಿಸಿ ಸೂಚಿಸಿದರು.

ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳು ಸಮರ್ಪಕ ಬಳಕೆ ಆಗುತ್ತಿಲ್ಲ. ಯೋಜನೆಗಳ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ತೋರಬಾರದು. ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು ಎಂದು ಶಾಸಕ ಆಸೀಫ್ (ರಾಜು) ಸೇಠ್ ಹೇಳಿದರು.

ಮೀನುಗಾರಿಕೆ ಇಲಾಖೆಯಿಂದ ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಬಲೆ ಹಾಗೂ ಇತ್ಯಾದಿ ಅಗತ್ಯ ಉಪಕರಣಗಳನ್ನು ನೀಡಲಾಗಿದೆ. ಅದರ ಮಾಹಿತಿ ಕೂಡ ಇಲಾಖಾ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲು, ಜಿಲ್ಲೆಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 30 ಅಲ್ಪಸಂಖ್ಯಾತರ ಯುವಕ ಯುವತಿಯರಿಗೆ ಈಗಾಗಲೇ ಉದ್ಯೋಗ ದೊರೆತಿವೆ. ವೃತ್ತಿ ಮಾರ್ಗದರ್ಶನ ಯೋಜನೆಯಡಿ ಸ್ಥಳೀಯ ಕಾಲೇಜುಗಳಲ್ಲಿ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು.

ಬೆಳಗಾವಿಯಲ್ಲಿ ಮಹಿಳಾ ಮತ್ತು ಪುರುಷರ ಐಟಿಐ ಕಾಲೇಜುಗಳಲ್ಲಿ ಮೀಸಲಾತಿ ಅನ್ವಯ ಈಗಾಗಲೇ ಪ್ರವೇಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತಿದೆ. ಮಹಿಳಾ ಐಟಿಐ ಕಾಲೇಜಿನಲ್ಲಿ ಕೂಡ ಈಗಾಗಲೇ 8 ಮುಸ್ಲಿಂ ಹಾಗೂ 13 ಜೈನ್ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ ಎಂದು ವಿವರಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಬಹಳಷ್ಟು ಅರ್ಜಿ ಬಂದಿವೆ. ಸ್ಥಳೀಯ ಶಾಸಕರಿಂದ ಮಾಹಿತಿ ನೀಡಿ, ಕೂಡಲೇ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಡಿಸಿ ಸೂಚಿಸಿದರು.

ಅರ್ಹರಿಗೆ ಸಾಲ ಸೌಲಭ್ಯ ಒದಗಿಸಿ:

ಡೇ-ನಲ್ಮ್ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಈಗಾಗಲೇ ವಿವಿಧ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಗಳಿಗೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಆದರೆ 4 ಅರ್ಜಿಗಳಿಗೆ ಮಾತ್ರ ಬ್ಯಾಂಕ್‌ನಿಂದ ಅಪ್ರೂವಲ್ ಆಗಿವೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಬ್ಯಾಂಕ್ ಗಳಿಗೆ ಖುದ್ದಾಗಿ ಸಂಪರ್ಕಿಸಿ ಅರ್ಜಿಗಳನ್ನು ಅಪ್ರೂವಲ್ ನೀಡಲು ಸೂಚಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತರ ಸ್ವ ಸಹಾಯ ಗುಂಪುಗಳಿಗೆ ನೇರವಾಗಿ ಸಾಲ ಒದಗಿಸಬೇಕು.

ಸ್ವ-ಸಹಾಯ ಗುಂಪಿನ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುವವರೆಗೂ ಪಾಲಿಕೆ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.

ರೈತರಿಗೆ ಸಾಲ ಸೌಲಭ್ಯ:

ಡಿಸಿಸಿ ಬ್ಯಾಂಕ್ ಮೂಲಕ 4 ಎಕರೆ ನೀರಾವರಿ ಜಮೀನು ಹೊಂದಿದ ರೈತರಿಗೆ ಶೇ.3 ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ಖರೀದಿಸಲು ಸಾಲ ನೀಡಲಾಗುವುದು.

₹5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಕಲಂದಾರ ತಿಳಿಸಿದರು.

ಪಶುಪಾಲನಾ ಇಲಾಖೆಯಿಂದ ಮುಖ್ಯಮಂತ್ರಿ ಅಮೃತ್ ಜೀವನ ಯೋಜನೆಯಡಿ ಹೈನುಗಾರಿಕೆ ಘಟಕ ಸ್ಥಾಪಿಸಲು ಈಗಾಗಲೇ ಸಹಾಯಧನ, ಸಾಲ ಸೌಲಭ್ಯ ನೀಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಬ್ದುಲ್ ರಶೀದ್ ಮಿರ್ಜನ್ನವರ, ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಗಂಗಾಧರ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ ಕುಲಕರ್ಣಿ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!