ಧಾರವಾಡ: ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನವೇ ನನ್ನ ಮೊದಲ ಆದ್ಯತೆ. ಜೊತೆಗೆ ಸಮಸ್ಯೆ ಮುಕ್ತ ಧಾರವಾಡ ಗ್ರಾಮೀಣ ಜಿಲ್ಲೆ ಮಾಡಲು ಕ್ರಮ ವಹಿಸುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಆಗದಿರುವ ಹಿನ್ನೆಲೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಿ, ಶೇ. 50ಕ್ಕಿಂತ ಕಡಿಮೆ ಮಾನವ ದಿನಗಳನ್ನು ಸೃಜನೆ ಮಾಡಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೋಟಿಸ್ ನೀಡಲಾಗಿದೆ. ಕನಿಷ್ಠ ಶೇ. 75 ರಷ್ಟು ಸಾಧನೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಶಾಲಾ ವನ ನಿರ್ಮಾಣಪ್ರತಿ ತಾಲೂಕಿನಲ್ಲಿ ಸಾಕಷ್ಟು ಬಯಲು, ಆವರಣ ಗೋಡೆ ಹೊಂದಿದ, ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ನಡುವೆ ಒಡಂಬಡಿಕೆಯೊಂದಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಶಾಲಾ ವನ ನಿರ್ಮಿಸಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ 102 ಗ್ರಾಪಂಗಳಲ್ಲಿ ನರೇಗಾ ಕೂಲಿಕಾರರ ಮಕ್ಕಳ ಆರೈಕೆಗಾಗಿ ಕೂಸಿನ ಮನೆಗಳನ್ನು ಸ್ಥಾಪಿಸಲಾಗಿದೆ. ಉಳಿದ ಗ್ರಾಪಂಗಳಲ್ಲೂ ಇವುಗಳನ್ನು ಸ್ಥಾಪಿಸಲು ಸೂಚಿಸಿರುವುದಾಗಿ ಹೇಳಿದರು.
ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿನ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷದಲ್ಲಿ ಎರಡು ಬಾರಿ ತೆರಿಗೆ ವಸೂಲಾತಿ ಅಭಿಯಾನ ಕೈಗೊಳ್ಳಲಾಗಿದೆ. ಈ ವರೆಗೆ ₹17 ಕೋಟಿಗಳಷ್ಟು ತೆರಿಗೆ ವಸೂಲಾತಿ ಮಾಡಿದ್ದು, ಕಳೆದ ಸಾಲಿಗೆ ಹೋಲಿಸಿದ್ದಲ್ಲಿ 10 ಕೋಟಿಗಳಷ್ಟು ಹೆಚ್ಚಿನ ತೆರಿಗೆ ವಸೂಲಾತಿ ಮಾಡಲಾಗಿದೆ. ಮಾರ್ಚ್ 31ರೊಳಗಾಗಿ ಪ್ರಸಕ್ತ ಸಾಲಿನ ಬೇಡಿಕೆಯನ್ನು ಶೇ. 100ರಷ್ಟು ಮಾಡುವ ಗುರಿ ಹೊಂದಲಾಗಿದೆ.
ಜಿಲ್ಲೆಯಲ್ಲಿ 467 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಕೆಲವೊಂದು ಸ್ಥಗಿತಗೊಂಡಿವೆ. ಸಾರ್ವಜನಿಕರಿಗೆ ತೊಂದರೆ ಆಗಿರುವ ಕುರಿತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಿ, ಕೂಡಲೇ ಕ್ರಮವಹಿಸಿ, ಶುದ್ಧ ಕುಡಿಯುವ ನೀರಿನ ಘಟಕಗಳು ಪುನಃ ಕಾರ್ಯನಿರ್ವಹಿಸುವಂತೆ ಕ್ರಮವಹಿಸಲಾಗುವುದು ಎಂದರು.
ಬರಗಾಲ ನಿರ್ವಹಣೆ