- ಸುರಕ್ಷಿತ ಬಾಲ ಅಭಿಯಾನ ಫೋಕ್ಸೋ ಕಾಯ್ದೆ ಜಾಗೃತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನ್ಯಾಮತಿ
ಮಕ್ಕಳು ದೇಶದ ಭವಿಷ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ಸಮಾಜಕ್ಕೆ ಕಳಂಕವಾಗಿದೆ. ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶತೆ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಪೋಷಕರು ಮನೆಯಲ್ಲಿ ಈ ಬಗ್ಗೆ ಸೂಕ್ತ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಹೊನ್ನಾಳಿ ವಕೀಲರ ಸಂಘದ ಅಧ್ಯಕ್ಷ ಗುಡ್ಡಪ್ಪ ತಿಳಿಸಿದರು.ತಾಲೂಕಿನ ಸುರಹೊನ್ನೆ ಗ್ರಾಮದ ಪಿಎಂಶ್ರೀ ಕೆಪಿಎಸ್ ಶಾಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಆದೇಶ ಅನ್ವಯ, ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶದಂತೆ, ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜ್ಞಾಪನದಂತೆ, ಹೊನ್ನಾಳಿ ವಕೀಲರ ಸಂಘದ ಪದಾಧಿಕಾರಿಗಳಿಂದ ಸುರಕ್ಷಿತ ಬಾಲ ಅಭಿಯಾನ ಫೋಕ್ಸೋ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯನ್ನು ಮಗುವೆಂದು ಪರಿಗಣಿಸಲಾಗುತ್ತಿದ್ದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೇ ಗಂಡುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೂ ಅನ್ವಯ ಆಗುತ್ತದೆ. ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದರೆ, ಅದನ್ನು ಪೊಲೀಸ್ ಅಥವಾ ಮಕ್ಕಳ ಸಹಾಯವಾಣಿಗೆ ತಿಳಿಸುವುದು ಕಡ್ಡಾಯವಾಗಿದೆ. ಮಾಹಿತಿ ಮುಚ್ಚಿಡುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದ ಅವರು, ಮಕ್ಕಳ ಮೇಲಿನ ದೌರ್ಜನ್ಯ ಕಂಡರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಹೇಳಿದರು.
- - -