ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ ದೇಶದ ಆಡಳಿತ ವ್ಯವಸ್ಥೆ, ಸಾಮಾಜಿಕ ಸಮಸ್ಯೆಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಬೇಕು.
ಜಿಲ್ಲಾ ಮಟ್ಟದ ಯುವ ಸಂಸತ್ ಅಧಿವೇಶನದಲ್ಲಿ ಪ್ರಧಾನ ಜಿಲ್ಲಾ, ಸತ್ರ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅಭಿಮತ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಶನಿವಾರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ನ ಸರ್. ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ''''''''ಯುವ ಸಂಸತ್'''''''' ಅಧಿವೇಶನವು ಅತ್ಯಂತ ಯಶಸ್ವಿಯಾಗಿ ಜರುಗಿತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅವರು ಅಧಿವೇಶನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ಯುವಜನತೆಯೇ ನಾಳೆಯ ದೇಶದ ಶಿಲ್ಪಿಗಳು. ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ಕಲಾಪಗಳ ಕಾರ್ಯವೈಖರಿ ಮತ್ತು ಕಾಯ್ದೆ ಕಾನೂನುಗಳ ರಚನೆ ಹೇಗೆ ನಡೆಯುತ್ತದೆ ಎಂಬುದನ್ನು ಯುವಜನರು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಇಂತಹ ಅಣಕು ಯುವ ಸಂಸತ್ಗಳು ಸೂಕ್ತ ವೇದಿಕೆಯಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ ದೇಶದ ಆಡಳಿತ ವ್ಯವಸ್ಥೆ, ಸಾಮಾಜಿಕ ಸಮಸ್ಯೆಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಬೇಕು. ನಾಯಕತ್ವ ಗುಣ, ಸಾರ್ವಜನಿಕ ವೇದಿಕೆಯಲ್ಲಿ ವಿಷಯ ಮಂಡನೆ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಯುವ ಸಂಸತ್ ನೆರವಾಗುತ್ತದೆ. ಇಂದಿನ ಅಣಕು ಸಂಸತ್ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಉತ್ಸಾಹ ಹಾಗೂ ವಿಷಯ ಮಂಡನೆಯ ರೀತಿ ಅಭಿನಂದನಾರ್ಹ ಎಂದು ಬಣ್ಣಿಸಿದರು.
ಇಂದಿನ ಯುವ ಸಂಸತ್ತಿನಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಾಲೂಕು ಮಟ್ಟದಲ್ಲಿ ನಡೆಸಿದ ಯುವ ಸಂಸತ್ ಅಧಿವೇಶನಗಳಲ್ಲಿ ಉತ್ತಮವಾಗಿ ಮಾತನಾಡಿದ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದೇ ರೀತಿ ಇಂದಿನ ಯುವ ಸಂಸತ್ ನಲ್ಲಿ ಚೆನ್ನಾಗಿ ವಿಷಯ ಮಂಡನೆ ಮಾಡಿದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಯುವ ಸಂಸತ್ ಗೆ ಕಳುಹಿಸಿಕೊಡಲಾಗುವುದು. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಈ ಯುವ ಸಂಸತ್ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಯಾವುದೇ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದ ಜೊತೆಗೆ ಪ್ರಸ್ತುತ ಇರುವ ಸಾಮಾಜಿಕ ವ್ಯವಸ್ಥೆಗಳಾದ ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಇತರ ಆಡಳಿತ ಸಂಸ್ಥೆಗಳಿಗೆ ಭೇಟಿ ನೀಡಿ ಅನುಭವಾತ್ಮಕ ಜ್ಞಾನವನ್ನು ಪಡೆದುಕೊಂಡರೆ ಯಶಸ್ಸು ಸಿಗಲಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲರೂ ಪ್ರಯತ್ನಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರೇರಣಾಧಾಯಕ ನುಡಿಗಳನ್ನು ನುಡಿದರು.
ಜಿಪಂ ಸಿಇಒ ಡಾ.ವೈ.ನವೀನ್ ಭಟ್ ಮಾತನಾಡಿ, ಇಂದಿನ ಅಣಕು ಯುವ ಸಂಸತ್ ಅಧಿವೇಶನದಲ್ಲಿ ಸ್ಪೀಕರ್, ಮುಖ್ಯಮಂತ್ರಿ, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರ ಪಾತ್ರವಹಿಸಿದ್ದ ವಿದ್ಯಾರ್ಥಿಗಳು ಸಾರ್ವಜನಿಕ ಹಿತಾಸಕ್ತಿಯ ನಾನಾ ವಿಷಯಗಳ ಕುರಿತು ಚರ್ಚೆ ನಡೆಸಿ, ಶಾಸನಸಭೆಯ ನೈಜ ವಾತಾವರಣವನ್ನು ಮರುಸೃಷ್ಟಿಸಿದ್ದಾರೆ. ಈ ಸಂಸತ್ ನಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಮುಂದಿನ 20 ವರ್ಷಗಳಲ್ಲಿ ತಾವು ಇಂದು ನಿರ್ವಹಿಸಿದ ಪದವಿಗಳಿಗೆ ಭಾಜನರಾಗುವ ರೀತಿ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಗುರ್ತಿಸಿಕೊಳ್ಳಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಂಡರಿನಾಥ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ರಮೇಶ್ ಇದ್ದರು.
ಯುವ ಸಂಸತ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಎತ್ತಿನಹೊಳೆ, ಎಚ್.ಎನ್.ವ್ಯಾಲಿ, ಕೆ.ಸಿ. ವ್ಯಾಲಿಗಳ 3ನೇ ಹಂತದ ಶುದ್ದೀಕರಣ, ನೀರಾವರಿ ಯೋಜನೆಗಳು, ಬೆಲೆ ಏರಿಕೆ, ಹಾಲಿನ ದರ ಏರಿಕೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಕುರಿತ ಬಿತ್ತಿ ಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಿಕೆಬಿ-4 ಜಿಲ್ಲಾ ಪಂಚಾಯತ್ ನ ಸರ್. ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ''''''''ಯುವ ಸಂಸತ್'''''''' ಅಧಿವೇಶನದಲ್ಲಿ ಗಣ್ಯರು ಮಕ್ಕಳ ಸಹಾಯವಾಣಿ ಕುರಿತ ಬಿತ್ತಿ ಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.