ಸಂಪತ್‌ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ

KannadaprabhaNewsNetwork | Published : May 18, 2025 2:05 AM
Follow Us

ಸಾರಾಂಶ

ಸೋಮವಾರಪೇಟೆಯ ಗುತ್ತಿಗೆದಾರ ಸಂಪತ್ ಕುಮಾರ್‌ ಅಲಿಯಾಸ್‌ ಶಂಭುವನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಪಿ ಎಂ ಗಣಪತಿಯನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕಳೆದ ಎಂಟು ದಿನಗಳ ಹಿಂದೆ ಸೋಮವಾರಪೇಟೆಯ ಗುತ್ತಿಗೆದಾರ ಸಂಪತ್ ಕುಮಾರ್ ಅಲಿಯಾಸ್ ಶಂಭುವನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಪಿ.ಎಂ ಗಣಪತಿಯನ್ನು ಶುಕ್ರವಾರ ರಾತ್ರಿ ಕೊಡಗು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಗಣಪತಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಸೋಮವಾರಪೇಟೆಯ ಒ ಎಲ್ ವಿ ಕಾನ್ವೆಂಟ್ ಬಳಿಯ ನಿವಾಸಿ ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪಿ.ಎಂ.ಗಣಪತಿ ಕಳೆದ ಸೋಮವಾರದಿಂದ ಪೊಲೀಸರ ವಿಚಾರಣೆಗೆ ಹಾಜರಾಗದೆ ಪಟ್ಟಣದಿಂದ ಪರಾರಿಯಾಗಿದ್ದರು. ಇದರಿಂದ ಸಂಶಯಗೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಆರಂಭಿಸಿದ್ದರು. ಆರೋಪಿಯನ್ನು ಸೆರೆ ಹಿಡಿದಿರುವ ಪೊಲೀಸರು ಮಡಿಕೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಹಾನಗಲ್ ಗ್ರಾಮದ ಕಿರಣ್, ಆತನ ಪತ್ನಿ ಸಂಗೀತ ಹಾಗೂ ಹತ್ಯೆಗೆ ಸಹಕರಿಸಿದ ಗಣಪತಿಯ ಸಹೋದರ ಪಿ.ಎಂ.ಗೋಪಿ, ಕಿರಣ್ ನ ಭಾವ ಹಾಸನ ಜಿಲ್ಲೆಯ ಶ್ರೀಧರ್ ಹಾಗೂ ಬೆಂಗಳೂರಿನ ಕಾರು ಚಾಲಕ ಮನು ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕೊಲೆಯಾದ ಐದು ದಿನಗಳ ನಂತರ ಸಂಪತ್ ನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲೆ ದೊರಕಿತ್ತು. ದೃಶ್ಯಂ ಸಿನಿಮಾ ಶೈಲಿಯಲ್ಲಿ ಹತ್ಯೆ!ಕೊಲೆ ಪ್ರಮುಖ ಆರೋಪಿಗಳಾದ ಗಣಪತಿ, ಕಿರಣ್ ಮತ್ತು ಸಂಗೀತ ಮೂವರು ಸೇರಿ ಏಪ್ರಿಲ್ ನಲ್ಲೇ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಅದರಂತೆ, ಕೊಲೆ ಮಾಡಿ ಸಾಗಿಸಲು ಎಲ್ಲೆಲ್ಲಿ ತೊಂದರೆಯಿದೆ, ಅನುಕೂಲತೆ ಇದೆ ಹಾಗೂ ಕೊಲೆ ಮಾಡಲು ಜಾಗವನ್ನು ಗೊತ್ತು ಮಾಡುವುದು, ಸಿಸಿ ಕ್ಯಾಮರಗಳು ಇಲ್ಲದ ಸ್ಥಳಗಳನ್ನೆಲ್ಲಾ ಪರಿಶೀಲನೆ ನಡೆಸಿ, ಯಾವುದೇ ಸಾಕ್ಷ್ಯಗಳು ಸಿಗದಂತೆ ವ್ಯವಸ್ಥೆ ಮಾಡಿಕೊಂಡು ದೃಶ್ಯಂ ಸಿನಿಮಾ ಮಾದರಿಯಲ್ಲಿ ಕೊಲೆಗೆ ಸಂಚು ರೂಪಿಸಿ ಹಂತಕರು ಜಾಣತನ ಪ್ರದರ್ಶಿಸಿದ್ದಾರೆ. ಮೂರು ದಿನಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ಸೆರೆಯಾದ ಸಂಗೀತನ ಪತಿ ಕಿರಣ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದು ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಶುಕ್ರವಾರದಂದು ರಾತ್ರಿ 9ರ ಸುಮಾರಿಗೆ ಹಾನಗಲ್ ಗ್ರಾಮದ ಕೆರೆಯ ಬಳಿ ಎಡಗಡೆಗೆ ತೆರಳುವ ರಸ್ತೆಯಲ್ಲಿ ಜೆಸಿಬಿಯಿಂದ ಮಣ್ಣು ತೆಗೆಯಲಾಗಿದ್ದು, ಸ್ವಲ್ಪ ಕಾಡಿನಂತೆ ಗುತ್ತಿ ಇರುವ ಪ್ರದೇಶಕ್ಕೆ ಸಂಗೀತ, ಸಂಪತ್ ನನ್ನು ಮಾಮೂಲಿನಂತೆ ಬರಲು ತಿಳಿಸಿದ್ದಾಳೆ. ಆ ಜಾಗದಲ್ಲಿ ಬಹಳ ಹಿಂದಿನಿಂದಲೂ ಸಂಪತ್ ಮತ್ತು ಸಂಗೀತ ಮಾತುಕತೆ ನಡೆಸುವ ಸ್ಥಳವಾಗಿತ್ತೆಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಹೀಗಾಗಿ ಯಾರೂ ಇರುವುದಿಲ್ಲವೆಂಬುದನ್ನು ಅರಿತ ಸಂಪತ್ ಒಂಟಿಯಾಗಿ ಆ ಸ್ಥಳಕ್ಕೆ ಬಂದಿದ್ದಾನೆ. ಸಂಗೀತ ಹಾಗೂ ಸಂಪತ್ ಮಾತನಾಡುತಿದ್ದಂತೆಯೇ ಕತ್ತಲೆಯಲ್ಲಿ ಹಿಂಬಂದಿಯಿಂದ ಬಂದು ದೊಣ್ಣೆಯಲ್ಲಿ ತಲೆಗೆ ಹೊಡೆಯಲಾಯಿತು ನಂತರ ಸಂಪತ್ ಆಕ್ರಮಣ ಮಾಡಲು ಅವಕಾಶ ಕೊಡದೆ ಕತ್ತಿಯಿಂದ ಕುತ್ತಿಗೆಯ ಹಿಂಭಾಗ ಹಾಗೂ ಕೈಗೆ ಮನಸೋ ಇಚ್ಚೆ ಕಡಿದು , ಸಂಪತ್ ನ ಪ್ರಾಣ ಪಕ್ಷಿ ಹಾರಿಹೋಗಿರುವುದನ್ನು ಖಚಿತ ಪಡಿಸಿಕೊಂಡು ನಂತರ ಕೊಲೆ ಮಾಡಿದ ಸ್ಥಳದಲ್ಲಿ ಬಿದ್ದಿದ್ದ ರಕ್ತದ ಕಲೆಗಳ ಮೇಲೆ ನೀರು ಸುರಿದು, ಮಣ್ಣನ್ನು ಅಗೆದು ಚೀಲಕ್ಕೆ ತುಂಬಿಸಿ ನೀರಿಗೆ ಬಿಟ್ಟಿದ್ದಾರೆ. ನಂತರ ಆರೋಪಿಗಳು ಹಾಕಿದ್ದ ಬಟ್ಟೆಯನ್ನು ನೀರಿನಲ್ಲೆ ತೊಳೆದು, ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಹತ್ಯೆ ಮಾಡಿದ ನಂತರ ಸಂಪತ್ ಕುಶಾಲನಗರದಿಂದ ತನ್ನ ಸ್ನೇಹಿತ ಜಾನ್ ಪೌಲ್ನಿಂದ ತೆಗೆದುಕೊಂಡು ಬಂದಿದ್ದ ಕಾರಿನಲ್ಲಿಯೇ ಆತನ ಮೃತದೇಹವನ್ನು ತುಂಬಿಸಿ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಳ್ಳಿ ಮಠದ ಗದ್ದೆ ಬಳಿಯಿರುವ ನಿರ್ಜನ ಪ್ರದೇಶವೊಂದರಲ್ಲಿ ಸಂಪತ್ನ ಶವವನ್ನು ಶನಿವಾರದಂದು ಬೆಳಗಿನ ಜಾವ ಎಸೆದಿರುವುದಾಗಿ ಕಿರಣ್ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ನಂತರ ಸಂಪತ್ ತಂದಿದ್ದ ಕಾರನ್ನು ಮಾಗೇರಿ ಸಮೀಪದ ಕಲ್ಲಹಳ್ಳಿ ಗ್ರಾಮದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾರೆ. ನಂತರ ಆರೋಪಿಗಳು ಧರಿಸಿದ್ದ ಬಟ್ಟೆಯನ್ನು ನೀರಿನಲ್ಲಿ ತೊಳೆದು, ಮೂಟೆಗೆ ತುಂಬಿಸಿ ನದಿಗೆ ಎಸೆದಿದ್ದಾರೆ. ಅದೇ ವೇಳೆಗೆ ಸ್ಥಳಕ್ಕೆ ಬೇರೊಂದು ಕಾರನ್ನು ಬರುವಂತೆ ಹೇಳಿ ಬೆಂಗಳೂರಿನ ಮನು ಎಂಬುವರನ್ನು ಮಾತುಕತೆ ನಡೆಸಿ ನಂಬರ್ ಪ್ಲೇಟ್ ಬದಲಿಸಿ ಬರುವಂತೆ ತಿಳಿಸಿದ್ದಾರೆ. ಅದರಂತೆ ಮನುವಿನ ಕಾರಿನಲ್ಲಿಯೇ ಸೋಮವಾರಪೇಟೆಗೆ ಬಂದ ಹಂತಕರು ಮತ್ತೆ ತಾವು ಧರಿಸಿದ್ದ ಬಟ್ಟೆಯನ್ನು ಮೂರನೇ ಬಾರಿಗೆ ಬದಲಾಯಿಸಿ, ಸಾಕ್ಷ್ಯ ದೊರಕದಂತೆ ಬಟ್ಟೆಯನ್ನು ನೀರಿನಲ್ಲಿ ಮುಳುಗಿಸಿ, ನಂತರ ಸುಟ್ಟು ಹಾಕಿದ್ದಾರೆ. ನಂತರ ಪಟ್ಟಣದಲ್ಲಿಯೇ ಇದ್ದು ಭಾನುವಾರದಂದು ಮೈಸೂರಿಗೆ ಕಿರಣ್ ಮತ್ತು ಸಂಗೀತ ವಿವಾಹ ಸಮಾರಂಭವೊಂದರ ಸಂಬಂಧವಾಗಿ ಬಟ್ಟೆ ಖರೀದಿಸಲು ತೆರಳಿದ್ದಾರೆ. ನಂತರ ಬರುವಾಗ ಸಂಗೀತ ಮಾತ್ರ ಕಿರಣ್ ಬಳಸುತ್ತಿದ್ದ ಮೊಬೈಲ್ ನೊಂದಿಗೆ ಹಿಂತಿರುಗಿದ್ದಾಳೆ ಎನ್ನಲಾಗಿದೆ. ಸೋಮವಾರದವರೆಗೂ ಪಟ್ಟಣದಲ್ಲಿದ್ದ ಗಣಪತಿ ನಂತರ ಪೊಲೀಸರ ವಿಚಾರಣೆಗೆ ಸಿಗದೆ ದಿಢೀರ್ ನಾಪತ್ತೆಯಾಗುತ್ತಾನೆ. ಒಂದು ವಾರದ ಹಿಂದೆಯೇ ಸಂಚು ರೂಪಿಸಲಾಗಿತ್ತೇ?: ಆರೋಪಿ ಕಿರಣ್ ನೀಡಿದ ಮಾಹಿತಿಯಂತೆ, ಮೇ 2ರಂದೇ ಸಂಪತ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದರೆ ಅರ್ಧ ದಾರಿಗೆ ಬಂದ ಸಂಪತ್ ವಾಪಾಸು ತೆರಳಿ ಹಂತಕರ ಸ್ಕೇಚ್‌ನ್ನು ವಿಫಲಗೊಳಿಸಿದ್ದ. ಆದರೆ ಒಂದು ವಾರದ ನಂತರ ರಾತ್ರಿ ಅದೇ ಸ್ಥಳಕ್ಕೆ ಸಂಪತ್ ಬಂದೇ ಬಿಟ್ಟ. ಇದೇ ಸಕಾಲ ಎಂದು ಅರಿತ ಹಂತಕರು ಮೇ 9ರಂದು ರಾತ್ರಿಯೇ ಸಂಪತ್ ನನ್ನು ಕೊಲೆ ಮಾಡಿರುವುದಾಗಿಯೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಸಿನಿಮೀಯ ಮಾದರಿಯಲ್ಲಿ ಕೊಲೆ ಮಾಡಿ, ಸಾಕ್ಷ್ಯಗಳನ್ನು ಆದಷ್ಟು ಇಲ್ಲದಂತೆ ಎಚ್ಚರಿಕೆ ವಹಿಸಿ, ಪ್ಲಾನ್ ಮಾಡಿ ಸಂಪತ್ ಹತ್ಯೆಗೆ ಸಂಚು ರೂಪಿಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಕೊಲೆಗೆ ಬ್ಲಾಕ್ ಮೇಲ್ ಕಾರಣವಾಯಿತೇ?!: ಈಗಾಗಲೇ ಮೊದಲ ಪತ್ನಿಯಿಂದ ದೂರವಿದ್ದ ಸಂಪತ್, ಸಂಗೀತಳನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಮದುವೆ ಆಗಲು ಒಪ್ಪದಿದ್ದರೆ ನಿನ್ನ ರಹಸ್ಯ ವಿಡಿಯೋಗಳನ್ನು ಮಾಧ್ಯಮಕ್ಕೆ ಹರಿಬಿಡುವುದಾಗಿಯೂ ಕೊಲೆಯಾದ ಸಂಪತ್ ಬ್ಲಾಕ್ ಮೇಲ್ ಮಾಡುತ್ತಿದ್ದ, ಈ ಕುರಿತು ಪತಿ ಕಿರಣ್ ಗೆ ಸಂಗೀತ ಮಾಹಿತಿ ನೀಡಿದ್ದಳು ಎಂಬುದು ವಿಚಾರಣೆ ವೇಳೆ ಸ್ವತಃ ಆರೋಪಿ ಕಿರಣ್ ತಿಳಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಗಣಪತಿ ಹಾಗೂ ಸಂಪತ್ ಒಂದು ಕಾಲದ ಆಪ್ತ ಮಿತ್ರರಾಗಿದ್ದು, ಹಣಕಾಸು ವಿಚಾರಕ್ಕಾಗಿ, ಕೆಲವು ಗೌಪ್ಯ ವಿಚಾರವಾಗಿ ಹಾಗೂ ಈ ಹಿಂದಿನ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಸಂಪತ್ ತನಗೆ ಸಹಕರಿಸದೇ ವಿರೋಧಿ ಬಣಕ್ಕೆ ಸಹಕರಿಸಿರುವ ವಿಚಾರ ತಿಳಿದ ಗಣಪತಿ ಕಳೆದ ಆರು ತಿಂಗಳಿನಿಂದ ಸಂಪತ್ನೊಂದಿಗೆ ವೈಮನಸ್ಸು ಮೂಡಿಸಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೇ ತಾನು ನೀಡಿದ್ದ ಹಣವನ್ನು ವಾಪಾಸು ನೀಡಬೇಕೆಂದು ಗಣಪತಿ ಹಾಗೂ ಕಿರಣ್ ಗೆ ಮೃತ ಸಂಪತ್ ಒತ್ತಡ ಹೇರುವುದು, ಜಗಳ ವಾಡುತ್ತಿದ್ದ ಎಂದು ತನಿಖೆಯ ವೇಳೆ ಕಿರಣ್ ಮಾಹಿತಿ ನೀಡಿದ್ದಾನೆ.ಶುಕ್ರವಾರದಂದು ರಾತ್ರಿಯಷ್ಟೇ ಗಣಪತಿಯನ್ನು ಬಂಧಿಸಿರುವ ಪೊಲೀಸರು, ಗಣಪತಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಅವರು ತನಿಖೆ ಮುಂದುವರೆಸಿದ್ದಾರೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಾಗಿದ್ದು, ಹತ್ಯೆಯ ವೇಳೆ ಸಂಪತ್ ಬಳಿಯಿದ್ದ ಸುಮಾರು 50-60 ಗ್ರಾಂ ನಷ್ಟು ಚಿನ್ನ ಏನಾಯಿತು? ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ. ಒಟ್ಟಾರೆ ಕುಶಾಲನಗರ, ಸೋಮವಾರಪೇಟೆ ಹಾಗೂ ಯಸಳೂರು ಪೊಲೀಸ್ ಠಾಣೆಗಳಿಗೆ ಕಳೆದ ಎಂಟು ದಿನಗಳಿಂದ ನಿದ್ದೆಗೆಡಿಸಿದ್ದ ಕೊಲೆ ಪ್ರಕರಣದ ಆರೋಪಿಗಳು ಸೆರೆಯಾಗಿರುವುದು ಸಾರ್ವಜನಿಕರೂ ಕೂಡ ನಿಟ್ಟುಸಿರು ಬಿಡುವಂತಾಗಿದೆ.

-------------------------------

ಆರು ತಿಂಗಳ ಹಿಂದೆ ಸ್ಕೆಚ್ಕಳೆದ ಆರು ತಿಂಗಳ ಹಿಂದೆಯೇ ಸಂಪತ್‌ ಕೊಲೆಗೆ ಸ್ಕೆಚ್ ರೂಪಿಸಲಾಗಿತ್ತು. 5 ಲಕ್ಷ ನೀಡಿ ಸುಪಾರಿ ನೀಡಲಾಗಿತ್ತು. ಆದರೆ ಸುಪಾರಿ ಪಡೆದುಕೊಂಡ ಸಮರ್ ಪೇಟೆ ಮೂಲದ ಹರ್ಷಿ, ಸಂಪತ್ ನನ್ನು ಮುಗಿಸಲು ಸತಾಯಿಸಿದ್ದ. ನನ್ನ ನಾದಿನಿಯ ಅಶ್ಲೀಲ ವಿಡಿಯೋ ತೋರಿಸಿ ಸಂಪತ್ ಬ್ಲಾಕ್ ಮೇಲ್ ಮಾಡಿದ್ದ. ಅಲ್ಲದೆ ನಿನ್ನ ಪತ್ನಿ ಇದೆ ತೋರಿಸಬೇಕಾ ಎಂದು ಕೂಡ ಬ್ಲಾಕ್ ಮೇಲ್ ಮಾಡುತ್ತಿದ್ದ. ಅಲ್ಲದೆ ಆಗಿಂದಾಗ್ಗೆ ಜಗಳ ತೆಗೆಯುತ್ತಿದ್ದ ಎಂದು ಪ್ರಮುಖ ಆರೋಪಿ ಗಣಪತಿ ತಿಳಿಸಿದ್ದಾನೆ.ಕೊಲೆ ಮಾಡಿ ಬೆಳ್ತಂಗಡಿಗೆ ಮಗನನ್ನು ನೋಡಲು ತೆರಳಿ ಅಲ್ಲಿಂದ ಕೇರಳಕ್ಕೆ ದೇವಸ್ಥಾನ ಒಂದಕ್ಕೆ ಹೋಗಿ ವಾಪಸ್ ಬರುವಾಗ ಕೇರಳದ ತಿರುವಾಂಕೂರುವಿನಲ್ಲಿ ಗಣಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ಯೆಗೆ ಮೊದಲು ಸಂಪತ್‌ ಮೇಲೆ ಫೈರಿಂಗ್ ಮಾಡಿದ್ದ ಗಣಪತಿ ಮಿಸ್ ಆಗಿದ್ದ ಕಾರಣ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ.