ಸರಿಹೋಯ್ತು ಆಸ್ತಿ ತೆರಿಗೆ ಪಾವತಿ ವೆಬ್‌

KannadaprabhaNewsNetwork | Published : Apr 7, 2025 1:30 AM

ಸಾರಾಂಶ

ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿಯ ಪೋರ್ಟಲ್‌ ಕಳೆದ ಶನಿವಾರದಿಂದ ಆರಂಭಗೊಂಡಿದ್ದು, ಆಸ್ತಿ ಮಾಲೀಕರು ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿಯ ಪೋರ್ಟಲ್‌ ಕಳೆದ ಶನಿವಾರದಿಂದ ಆರಂಭಗೊಂಡಿದ್ದು, ಆಸ್ತಿ ಮಾಲೀಕರು ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿದೆ.

ಕಳೆದ ಮಂಗಳವಾರದಿಂದಲೇ 2025-26ನೇ ಸಾಲಿನ ಆರ್ಥಿಕ ವರ್ಷ ಆರಂಭಗೊಂಡರೂ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿಯ ಪೋರ್ಟಲ್‌ ಸಿದ್ಧವಾಗಿರಲಿಲ್ಲ. ಹೀಗಾಗಿ, ಆಸ್ತಿ ಮಾಲೀಕರು ತೆರಿಗೆ ಪಾವತಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಪೋರ್ಟಲ್‌ ಅನ್ನು ಎನ್‌ಐಸಿ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುತ್ತಿದ್ದು, ಪ್ರಸಕ್ತ ಸಾಲಿನಿಂದ ಬಿಬಿಎಂಪಿಯ ವ್ಯಾಪ್ತಿಯ ಕಟ್ಟಡಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಘನತ್ಯಾಜ್ಯ ಶುಲ್ಕ ವಿಧಿಸಿ ಆಸ್ತಿ ತೆರಿಗೆಯೊಂದಿಗೆ ವಸೂಲಿಗೆ ತೀರ್ಮಾನಿಸಲಾಗಿದೆ.

ಜತೆಗೆ, ಸುಸ್ತಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆಯ ಶೇ.100ರಷ್ಟು ದಂಡ ವಿಧಿಸುವುದು, ಬಡ್ಡಿ ವಿಧಿಸುವುದಕ್ಕೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಪಾವತಿಸುವ ಪೋರ್ಟಲ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾಗಿತ್ತು. ಹೀಗಾಗಿ, ಪೋರ್ಟಲ್‌ ಪುನರ್‌ ಸಿದ್ಧಪಡಿಸುವುದು ಹಾಗೂ ಪರೀಕ್ಷೆ ಬಾಕಿ ಇತ್ತು. ಇದೀಗ ಸರಿಪಡಿಸಿ ಆಸ್ತಿ ಮಾಲೀಕರ ಬಳಕೆಗೆ ನೀಡಲಾಗಿದೆ.

ಆಸ್ತಿ ಮಾಲೀಕರು ಶಾಕ್‌

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ.25ರಿಂದ 30ರಷ್ಟು ಆಸ್ತಿ ತೆರಿಗೆಯಲ್ಲಿ ಏರಿಕೆ ಆಗಿರುವುದನ್ನು ಕಂಡು ಆಸ್ತಿ ಮಾಲೀಕರು ಆತಂಕಗೊಂಡಿದ್ದಾರೆ. ಕಳೆದ 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆ ಉಪಕರ ಸೇರಿದಂತೆ ಒಟ್ಟಾರೆ ₹9454 ಪಾವತಿ ಮಾಡಿದ್ದ ಆಸ್ತಿ ಮಾಲೀಕರಿಗೆ ಈ ಬಾರಿ ಘನತ್ಯಾಜ್ಯ ಶುಲ್ಕ ಸೇರಿದಂತೆ ಒಟ್ಟಾರೆ ₹12,078 ಪಾವತಿ ಮಾಡಬೇಕಾಗಿದೆ. ಈ ಬಾರಿ ಒಟ್ಟು ₹2,624 ಹೆಚ್ಚಳವಾಗಿದೆ.

ಕಳೆದ 2024-25ನೇ ಸಾಲಿನಲ್ಲಿ ಘನತ್ಯಾಜ್ಯ ಉಪಕರ ಮತ್ತು ಶುಲ್ಕ ಸೇರಿದಂತೆ ₹720 ಪಾವತಿ ಮಾಡಿದ್ದ ಜಾಗದಲ್ಲಿ ಈ ಬಾರಿ ₹3344 ಪಾವತಿ ಮಾಡಬೇಕಾಗಿದೆ. ಇದು ವಲಯವಾರು ಏರಿಳಿತ ಉಂಟಾಗಲಿದೆ.

Share this article