ಶಿರಹಟ್ಟಿ: ಪ್ರವಾದಿ ಮಹಮ್ಮದ್ ಪೈಗಂಬರ್ ಜಯಂತಿಯ ಈದ್ ಮಿಲಾದ್ ಹಬ್ಬವನ್ನು ಸೋಮವಾರ ಮುಸ್ಲಿಂ ಬಾಂಧವರು ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಬಕ್ರೀದ್, ರಂಜಾನ್ ಮೊದಲಾದ ಹಬ್ಬಗಳಲ್ಲಿ ಮಾಂಸಹಾರಕ್ಕೆ ಪ್ರಾಧಾನ್ಯತೆ ಇದ್ದರೆ ಈ ಹಬ್ಬದಲ್ಲಿ ಮಾತ್ರ ಸಿಹಿಗೆ ಪ್ರಾಧಾನ್ಯತೆ ಇರುತ್ತದೆ ಎನ್ನುವ ಸಂದೇಶ ತಿಳಿಸಿದರು.
ನಂತರ ಮೌಲಾನಾ ಮಜರ ಅಲಿಖಾನ ಪಠಾಣ ಈದ್ ಸಂದೇಶ ನೀಡಿ ಮಾತನಾಡಿದರು. ವಿಶ್ವ ಮಾನವತಾ ಸಂದೇಶದ ಮೂಲಕ ಜಗತ್ತಿನ ಸಕಲ ಜೀವಾತ್ಮರಿಗೂ ಘನತೆ ಮತ್ತು ಗೌರವದ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ಕೀರ್ತಿ ಪ್ರವಾದಿ ಮಹಮ್ಮದ್ ಪೈಗಂಬರ್ ಗೆ ಸಲ್ಲುತ್ತದೆ ಎಂದು ಹೇಳಿದರು.ಅಂದಿನ ಅರಬ್ ದೇಶಗಳ ಜನರಲ್ಲಿ ಬೇರೂರಿದ್ದ ಹಲವಾರು ಅಂಧ ಮತ್ತು ಅಮಾನವೀಯ ಆಚರಣೆಗಳಿಗೆ ಪೈಗಂಬರ್ ತಮ್ಮ ಜೀವನ ಮತ್ತು ಸಂದೇಶಗಳ ಮೂಲಕ ತಿಲಾಂಜಲಿ ನೀಡಿದರು. ಬಡವರನ್ನು ಜೀವನ ಪೂರ್ತಿ ಗುಲಾಮರನ್ನಾಗಿ ನೇಮಿಸಿಕೊಂಡು ಕಾಡು ಪ್ರಾಣಿಗಳಂತೆ ಅವರನ್ನು ಬಳಸಿಕೊಳ್ಳುತ್ತಿದ್ದ ಶ್ರೀಮಂತರ ಮಾನವ ವಿರೋಧಿ ಚಟುವಟಿಕೆ ನಿಲ್ಲಿಸಿ ಮಾನವೀಯತೆಯ ಪಾಠ ಬೋಧಿಸಿದರು ಎಂದರು.
ಈ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿಯ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯ ಕೋರಿದರು. ಆಸಾರ ಓಣಿ, ಮಕಾನಗಲ್ಲಿ, ತಳಗೇರಿ ಓಣಿ, ಮೇಗೇರಿ ಓಣಿ, ನಿಂಗಳಾಪೂರ ಸೇರಿದಂತೆ ಮುಸ್ಲಿಂ ಬಾಂಧವರು ಹೆಚ್ಚು ಇರುವ ಬಡಾವಣೆಗಳ ಬೀದಿಗಳಲ್ಲಿ ಹಸಿರು ಬಾವುಟ, ತೋರಣಗಳಿಂದ ಶೃಂಗರಿಸಲ್ಪಟ್ಟಿದ್ದವು. ಪ್ರಮುಖ ವೃತಗಳಲ್ಲಿ ಹಬ್ಬಕ್ಕೆ ಶುಭಾಶಯ ಕೋರುವ ಬ್ಯಾನರ ರಾರಾಜಿಸುತ್ತಿದ್ದವು.
ನಂತರ ಹಜರತ್ ಮಹಬೂಬ ಸುಬ್ಹಾನಿ ದರ್ಗಾದಿಂದ ಮೆರವಣಿಗೆಯು ಪ್ರಾರಂಭವಾಗಿ ಪ್ರಮುಖ ವೃತ್ತಗಳಲ್ಲಿ ಸಂಚರಿಸಿತು. ಹೊಸ ಬಟ್ಟೆ ಧರಿಸಿದ ಯುವಕರು ಬೈಕ್ ಅಟೋಗಳಲ್ಲಿ ಕಾರುಗಳಿಗೆ,ಟೆಂಪೋಗಳಿಗೆ ಬಾವುಟ ಹಾಕಿಕೊಂಡು ಮುಸ್ಲಿಂ ಬಾಂಧವರಿಂದ ಆಕರ್ಷಕ ಮತ್ತು ಭವ್ಯ ಮೆರವಣಿಗೆ ನಡೆಯಿತು.