- ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಉಡುಪಿಯ ಅಕ್ಬರ್ ಅಲಿ ಉಪನ್ಯಾಸ - - - ಕನ್ನಡಪ್ರಭ ವಾರ್ತೆ ಹರಿಹರ ಸೃಷ್ಠಿಕರ್ತನು ಸೃಷ್ಠಿಸಿದ ಸೃಷ್ಠಿಗಳನ್ನು ಆರಾಧಿಸುವ, ಪೂಜಿಸುವ ಬದಲು ಸೃಷ್ಠಿಕರ್ತನನ್ನು ಆರಾಧಿಸುವುದು ಸೂಕ್ತ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಉಡುಪಿಯ ಅಕ್ಬರ್ ಅಲಿ ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್, ಜೈ ಕರುನಾಡು ರಕ್ಷಣಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ರಾಬಿತಾ ಎ ಮಿಲ್ಲತ್ ಸಮಿತಿ, ದಲಿತ ಸಂಘರ್ಷ ಸಮಿತಿಯಿಂದ ಹರಿಹರದಲ್ಲಿ ಶುಕ್ರವಾರ ಆಯೋಜಿಸಿದ್ದ ಸೀರತ್ ಅಭಿಯಾನ-2024ರ ಸಮಾರೋಪದಲ್ಲಿ ಪ್ರವಾದಿ ಮುಹಮ್ಮದ್ ಮಹಾನ್ ಚಾರಿತ್ರ್ಯವಂತ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.ಎಲ್ಲ ಆಗು-ಹೋಗುಗಳ ಅರಿವಿರುವ ಸೃಷ್ಠಿಕರ್ತನಲ್ಲಿ ಪ್ರಾರ್ಥಿಸುವ ಮೂಲಕ ಜೀವನವನ್ನು ಪಾವನಗೊಳಿಸಬೇಕು. ಪ್ರವಾದಿ ಮುಹಮ್ಮದರು ಸೇರಿದಂತೆ ಇಸ್ಲಾಂ ಧರ್ಮದ ನೂರಾರು ಸ್ಮರಣೀಯರ ಒಂದೂ ಫೋಟೋ ಮುಸಲ್ಮಾನರ ಮನೆಯಲ್ಲಿಲ್ಲ. ಫೋಟೋಗಳಿದ್ದರೆ ಅದಕ್ಕೆ ಪೂಜಿಸಲು ಆರಂಭಿಸುತ್ತಾರೆಂದು ಅರಿತಿದ್ದ ಅವರು ಸೃಷ್ಠಿಕರ್ತನಿಗೆ ಮಾತ್ರ ಪ್ರಾರ್ಥಿಸುವಂತೆ ಸಂದೇಶ ನೀಡಿದ್ದರು ಎಂದರು.
ಸಾನಿಧ್ಯ ವಹಿಸಿದ್ದ ಪುಣ್ಯಕೋಟಿ ಗುರುಪೀಠದ ಬಾಲಯೋಗಿ ಜಗದೀಶ್ವರ ಶ್ರೀ ಮಾತನಾಡಿ, ತನ್ನವರನ್ನು ಪ್ರೀತಿಸಿ ಪರಧರ್ಮವನ್ನು ಗೌರವಿಸಿ, ಮಾದರಿ ಬದುಕು ಬದುಕಿದ ಪ್ರವಾದಿ ಮುಹಮ್ಮದ್ ಅವರ ಬದುಕು ಎಲ್ಲರಿಗೂ ಪ್ರೇರಕವಾಗಿದೆ ಎಂದರು.ಅರೋಗ್ಯ ಮಾತೆ ಚರ್ಚ್ ಪ್ರಧಾನ ಧರ್ಮಗುರು ಫಾದರ್ ಕೆ.ಎ. ಜಾರ್ಜ್ ಮಾತನಾಡಿ, ಸ್ನೇಹ ಮತ್ತು ಸದ್ಗುಣಗಳಿಂದ ಮನುಷ್ಯನನ್ನು ಗೆಲ್ಲಬಹುದೇ ವಿನಃ ಬಲ ಮತ್ತು ಶಕ್ತಿಯಿಂದ ಅಲ್ಲ ಎನ್ನುವುದು ಪ್ರವಾದಿ ಮುಹಮ್ಮದ್ ಅವರ ಸಂದೇಶವಾಗಿತ್ತು ಎಂದರು.
ದೊಡ್ಡಬಾತಿ ತಪೋವನದ ಸ್ಥಾಪಕ ಶಶಿಕುಮಾರ್ ಮೆಹರ್ವಾಡೆ ಮಾತನಾಡಿ, ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತಿರುವ ಇಂದಿನ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ನಾವೆಲ್ಲರೂ ನಮ್ಮ ಧರ್ಮವನ್ನು ಪಾಲಿಸುತ್ತ, ಇನ್ನೊಬ್ಬರ ಧರ್ಮ ಮತ್ತು ನಂಬಿಕೆಗಳ ಕುರಿತು ಒಳ್ಳೆಯ ಭಾವನೆ ಮೂಡಿಸಿಕೊಂಡು ಬದುಕಲು ಕಲಿಯಬೇಕಾಗಿದೆ ಎಂದರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಪ್ರವಾದಿ ಮುಹಮ್ಮದ್ (ಸ) ಲೇಖನ ಸಂಕಲನ ಕೃತಿಯನ್ನು ಅತಿಥಿಗಳು ಬಿಡುಗಡೆ ಮಾಡಿ ಮಾತನಾಡಿದರು.ಎಚ್.ಕೆ.ಕೊಟ್ರಪ್ಪ, ಎಚ್.ಮಲ್ಲೇಶ್, ಶ್ರೀನಿವಾಸ್ ಕೊಡ್ಲಿ, ಇಲಿಯಾಸ್ ಅಹ್ಮದ್, ಮೊಹಮ್ಮದ್ ಇಕ್ಬಾಲ್ ಮಕಾಂದಾರ್, ಟಿ.ಜೆ.ಮುರುಗೇಶಪ್ಪ, ಕೆ.ಬಿ.ರಾಜಶೇಖರ್, ಕವಿತಾ ಪೇಟೆಮಠ, ರಘುಪತಿ, ರಾಜಶೇಖರ್, ಮಂಜುನಾಥ ಗೌಡ, ಕೊಟ್ರೇಶಪ್ಪ, ಮೌಲಾನಾ ಮೊಹಮ್ಮದ್ ಶಾಹೀದ್, ಅಬ್ದುಲ್ ರಹಮಾನ್ ಡಾ.ಗುಲಾಮ್ ನಬಿ, ಶಿಕ್ಷಕ ರಿಯಾಜ್ ಅಹಮದ್ ಜಮಾಅತೆ ಇಸ್ಲಾಮಿ ಹಿಂದ್ ಹರಿಹರ ಘಟಕ ಅಧ್ಯಕ್ಷ ವೈ.ಜಿ ಅಬ್ದುಲ್ ಖಯುಮ್ ಹಾಗೂ ಇತರರು ಉಪಸ್ಥಿತರಿದ್ದರು.
- - -ಕೋಟ್‌ಇಂದಿನ ಯುವಜನತೆ ಮಾದಕ ದ್ಯವ್ಯದಂತಹ ದುಶ್ಚಟಗಳಿಗೆ ಮಾರು ಹೋಗುತ್ತಿದ್ದಾರೆ. ಅವರನ್ನು ಸೂಕ್ತ ಮಾರ್ಗಕ್ಕೆ ಕರೆ ತರುವ ಜವಾಬ್ದಾರಿ ಪೋಷಕರು, ಶಿಕ್ಷಕರು, ಧಾರ್ಮಿಕ ಮುಖಂಡರ ಮೇಲಿದೆ
- ಅಕ್ಬರ್ ಅಲಿ, ರಾಜ್ಯ ಕಾರ್ಯದರ್ಶಿ- - -
-29ಎಚ್‍ಆರ್‍ಆರ್1:ಹರಿಹರದಲ್ಲಿ ಆಯೋಜಿಸಿದ್ದ ಸೀರತ್ ಅಭಿಯಾನ-2024ರ ಸಮಾರೋಪದಲ್ಲಿ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.