ಕೊಪ್ಪಳದ ಕಿನ್ನಾಳ ರಸ್ತೆ, ಗಡಿಯಾರ ಕಂಬ ವೃತ್ತ ಅಭಿವೃದ್ಧಿಗಾಗಿ ಅನುದಾನಕ್ಕೆ ಪ್ರಸ್ತಾವನೆ

KannadaprabhaNewsNetwork |  
Published : Mar 09, 2024, 01:30 AM IST
Proposal for Grant for Development of Clock Pillar Circle, Kinnala Road, Koppal | Kannada Prabha

ಸಾರಾಂಶ

ಲೋಕಸಭಾ ಚುನಾವಣೆ ಘೋಷಣೆ ಮುನ್ನವೇ ಪ್ರಸ್ತಾವನೆಗೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಅಥವಾ ಆಗದಿದ್ದರೆ ಲೋಕಸಭಾ ಚುನಾವಣೆಯ ನಂತರವಾದರೂ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಿದ್ಧತೆ ನಡೆದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಗವಿಮಠ ರಸ್ತೆ, ಗಡಿಯಾರ ಕಂಬ ರಸ್ತೆ, ಜವಾಹರ ರಸ್ತೆ, ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಯ ಬಳಿಕ ಈಗ ಕಿನ್ನಾಳ ರಸ್ತೆಯ ಅಭಿವೃದ್ಧಿಗೆ ₹9.80 ಕೋಟಿ ಹಾಗೂ ಗಡಿಯಾರ ಕಂಬ ವೃತ್ತದ ಅಭಿವೃದ್ಧಿಗೆ ₹2 ಕೋಟಿ ರುಪಾಯಿ ಪ್ರಸ್ತಾವನೆ ಸಿದ್ಧವಾಗಿದೆ. ಇನ್ನೇನು ಅನುಮೋದನೆ ದೊರೆಯುತ್ತಿದ್ದಂತೆ ಕಾಮಗಾರಿ ಪ್ರಾರಂಭವಾಗಲಿದೆ.

ಲೋಕಸಭಾ ಚುನಾವಣೆ ಘೋಷಣೆ ಮುನ್ನವೇ ಪ್ರಸ್ತಾವನೆಗೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಅಥವಾ ಆಗದಿದ್ದರೆ ಲೋಕಸಭಾ ಚುನಾವಣೆಯ ನಂತರವಾದರೂ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಿದ್ಧತೆ ನಡೆದಿದೆ.ಕಿನ್ನಾಳ ರಸ್ತೆ:ಕೊಪ್ಪಳ ನಗರದ ಬಹುತೇಕ ರಸ್ತೆಗಳು ಈಗ ಸಿಮೆಂಟ್ ರಸ್ತೆಗಳಾಗಿ ಪರಿವರ್ತನೆಯಾಗಿವೆ. ಬೀದಿ ದೀಪ ಒಳಗೊಂಡ ಮತ್ತು ಎರಡೂ ಬದಿಯಲ್ಲಿ ಚರಂಡಿ ಒಳಗೊಂಡು ಅಭಿವೃದ್ಧಿಯಾಗಿವೆ. ಅದೇ ಮಾದರಿಯಲ್ಲಿ ಕಿನ್ನಾಳ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಪ್ರಸ್ತಾವನೆ ಸಿದ್ಧವಾಗಿದೆ.ಇದರ ಮೊದಲ ಭಾಗವಾಗಿ ಈಗಾಗಲೇ ಅಶೋಕ ವೃತ್ತದಿಂದ ಐಬಿವರೆಗೂ ಸಿಮೆಂಟ್ ರಸ್ತೆ ಮತ್ತು ಬೀದಿ ದೀಪಗಳನ್ನು ಮಾಡಲಾಗಿದೆ.ಅದೇ ಮಾದರಿಯಲ್ಲಿಯೇ ಕಿನ್ನಾಳ ರಸ್ತೆಯನ್ನು ಐಬಿಯಿಂದ ಓಜನಳ್ಳಿ ಸರ್ಕಲ್‌ವರೆಗೂ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದಲ್ಲಿಯೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ, ಇದಕ್ಕಾಗಿ ಕೆಕೆಆರ್‌ಡಿಬಿಯಲ್ಲಿ ₹9.8 ಕೋಟಿ ವೆಚ್ಚ ಮಾಡಲು ಯೋಜನೆ ಸಿದ್ಧಗೊಂಡಿದೆ.ಕೊಪ್ಪಳ ನಗರದಲ್ಲಿ ಕಿನ್ನಾಳ ರಸ್ತೆ ಅತಿವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಚಿಲವಾಡಗಿವರೆಗೂ ನಿವೇಶನಗಳನ್ನು ಮಾಡಲಾಗುತ್ತಿದೆ. ಓಜನಳ್ಳಿ ಕ್ರಾಸ್‌ವರೆಗೂ ನಗರ ಬೃಹದಾಕಾರವಾಗಿ ಬೆಳೆದಿದೆ. ಕಿನ್ನಾಳ ರಸ್ತೆ ಜವಾಹರ ರಸ್ತೆಯಷ್ಟೇ ಪ್ರಮುಖವಾಗಿ ಮಾರುಕಟ್ಟೆ ರಸ್ತೆಯಾಗಿ ಪರಿವರ್ತನೆಯಾಗುತ್ತಿದೆ. ಹೀಗಾಗಿ ಇದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎನ್ನುತ್ತಾರೆ ನಾಗರಿಕರು.ಗಡಿಯಾರ ಕಂಬ ವೃತ್ತ:ಗಡಿಯಾರ ಕಂಬ ಕೊಪ್ಪಳದ ಐಕಾನ್‌. ಗಡಿಯಾರ ಕಂಬ ಎನ್ನುವುದು ಮೂಲ ಕೊಪ್ಪಳದ ಕುರುಹು. ಇಂದಿಗೂ ಕೊಪ್ಪಳ ಎಂದರೆ ಗಡಿಯಾರ ಕಂಬ ಎನ್ನುವಷ್ಟರ ಮಟ್ಟಿಗೆ ಅದು ಪ್ರಸಿದ್ಧವಾಗಿದೆ. ಒಂದು ಕಾಲದಲ್ಲಿ ಇಡೀ ಕೊಪ್ಪಳ ನಿವಾಸಿಗಳಿಗೆ ಸಮಯ ಸೂಚಕವಾಗಿರುವುದಕ್ಕೆ ಇದನ್ನು ಗಡಿಯಾರ ಕಂಬ ಎಂದೇ ಕರೆಯಲಾಗುತ್ತಿದೆ. ಶತಮಾನಗಳ ಹಿಂದೆ ಈ ಕಂಬದ ನೆರಳನ್ನೇ ಗಡಿಯಾರದಲ್ಲಿರುವ ಮುಳ್ಳಿನ ಲೆಕ್ಕಾಚಾರದಲ್ಲಿ ಸಮಯ ಗೊತ್ತು ಮಾಡಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗುತ್ತದೆ.ಇಂಥ ಗಡಿಯಾರ ಕಂಬವನ್ನು ಈಗ ಕೆಕೆಆರ್‌ಡಿಬಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ ಬರೋಬ್ಬರಿ ₹2 ಕೋಟಿ ವೆಚ್ಚ ಮಾಡಲಾಗುತ್ತದೆ. ಗಡಿಯಾರ ಕಂಬದ ಇತಿಹಾಸದ ಫಲಕವನ್ನೊಳಗೊಂಡು ಗಡಿಯಾರ ಕಂಬ ಅಭಿವೃದ್ಧಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಜತೆಗೆ ವಿಪರೀತ ಮಾರುಕಟ್ಟೆ ಇರುವುದರಿಂದ ಟ್ರಾಫಿಕ್ ಸಮಸ್ಯೆಯೂ ಆಗುತ್ತಿದೆ. ಈ ವೃತ್ತವನ್ನು ಅಗಲೀಕರಣ ಮಾಡಲಾಗುತ್ತದೆ ಎನ್ನುವುದು ಗಮನಾರ್ಹ ಸಂಗತಿ.ಲೋಕಸಭಾ ಚುನಾವಣೆಗೂ ಮುನ್ನವೇ ಅನುಮೋದನೆ ಪಡೆದು, ಕಿನ್ನಾಳ ರಸ್ತೆ ಮತ್ತು ಗಂಡಿಯಾರ ಕಂಬ ವೃತ್ತ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಬೇಕು ಎಂದುಕೊಂಡಿದ್ದೇವೆ. ಆಗದಿದ್ದರೆ ನಂತರವಾದರೂ ಮಾಡಿಯೇ ಮಾಡುತ್ತೇವೆ. ಈಗಾಗಲೇ ಪ್ರಸ್ತಾವನೆ ಸಿದ್ಧವಾಗಿದೆನೆನ್ನುತ್ತಾರೆ ಶಾಸಕ ರಾಘವೇಂದ್ರ ಹಿಟ್ನಾಳ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ