ಕನ್ನಡಪ್ರಭ ವಾರ್ತೆ ಮಡಿಕೇರಿ
ಬೀದಿ ದೀಪ ಅಳವಡಿಕೆಗೆ ನಿಗದಿಯಾಗಿದ್ದ 1.5 ಕೋಟಿ ರು. ಬದಲಾವಣೆ ಮಾಡಿ ರಾಜಾಸೀಟ್ ರಸ್ತೆಗೆ ಕಾಂಕ್ರೀಟ್ ಹಾಕಲು ಸರ್ಕಾರಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿರುವ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಸಿ ಅಧಿಕಾರಿಗಳ ವಿರುದ್ಧ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ನಗರೋತ್ಥಾನ 4ನೇ ಹಂತಕ್ಕೆ 40 ಕೋಟಿ ರು.. ಬಿಡುಗಡೆ ಆಗಿದೆ. ಇದರಲ್ಲಿ 12 ಕೋಟಿ ರು.. ರಸ್ತೆಗೆ, 9.5 ಕೋಟಿ ರು. ಕಾವೇರಿ ಕಲಾ ಕ್ಷೇತ್ರಕ್ಕೆ ನೀರು ಪೂರೈಕೆಗೆ ನಿಗದಿಯಾಗಿದ್ದ ಮೊತ್ತವನ್ನೂ ಬೇರೆ ಉದ್ದೇಶಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿ ಮಾಹಿತಿ ನೀಡಿದರು. ಯಾರ ಗಮನಕ್ಕೆ ಬಾರದೆ ಕಾಮಗಾರಿಯನ್ನು ಬದಲಾಯಿಸಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಯಿತು.
ಇದಕ್ಕೆ ಅಧ್ಯಕ್ಷರು ಸಹಿ ಮಾಡಿದ್ದಾರೆಂದು ಪೌರಾಯುಕ್ತ ರಮೇಶ್ ಸಭೆಯ ಗಮನಕ್ಕೆ ತಂದ ಸಂದರ್ಭ ವಿಪಕ್ಷ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನಿಗದಿತ ಉದ್ದೇಶಕ್ಕೆ ನಿಗದಿಯಾಗಿದ್ದ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸಬೇಕು. ಬದಲಾವಣೆ ಸಂದರ್ಭ ಆಡಳಿತ ಮಂಡಳಿ ಗಮನಕ್ಕೆ ಯಾಕೆ ತರಲಿಲ್ಲ. 1.5 ಕೋಟಿ ರು.. ಕಾಮಗಾರಿ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.ಸದಸ್ಯ ಮನ್ಸೂರ್ ಅಲಿ ಮಾತನಾಡಿ ಅಧ್ಯಕ್ಷರು ಸಹಿ ಮಾಡುವಾಗ ಒಂದು ಬಾರಿ ಓದಿ ನಂತರ ಸಹಿ ಹಾಕಬೇಕು ಎಂದರು.
ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ ಈ ಪ್ರಸ್ತಾವನೆಯನ್ನು ತಡೆಹಿಡಿಯಲು ಸೂಚಿಸಲಾಗಿದೆ ಎಂದು ಸಭೆಯಲ್ಲಿ ಹೇಳಿದರು.ಪೌರಾಯುಕ್ತ ರಮೇಶ್ ಮಾತನಾಡಿ ಈ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿ ಬರಬೇಕು. ಅದರ ಒಳಗಾಗಿ ಈ ಪ್ರಸ್ತಾವನೆಯನ್ನು ತಡೆ ಮಾಡಲಾಗುವುದು. ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸೋಣ ಎಂದರು. ಈ ವೇಳೆ ಪ್ರಸ್ತಾವನೆಯನ್ನು ತಡೆ ಹಿಡಿಯುವಂತೆ ಸದಸ್ಯರು ಆಗ್ರಹಿಸಿದರು.
ಕೋಟಿ ವೆಚ್ಚದ ಛಾವಣಿ ಸೋರುತ್ತಿದೆ :ನಗರಸಭೆ ಕಟ್ಟಡಕ್ಕೆ ಛಾವಣಿ ಅಳವಡಿಕೆ ಕಾಮಗಾರಿ ಸರಿಯಾಗಿ ನಡೆದಿಲ್ಲ. ಮಳೆಗಾಲದಲ್ಲಿ ಸೋರುತ್ತಿದೆ. ಛಾವಣಿ ಅಳವಡಿಕೆಗೆ 1.25 ಕೋಟಿ ರು.. ಖರ್ಚು ಮಾಡುವ ಮೂಲಕ ವ್ಯರ್ಥ ಮಾಡಲಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದೆ. ತನಿಖೆ ಆಗಬೇಕು ಎಂದು ಸತೀಶ್ ಒತ್ತಾಯಿಸಿದರು. ಇಲ್ಲಿ ಗುಣಮಟ್ಟದ ಕೆಲಸ ಆಗಿಲ್ಲ. ಗುತ್ತಿಗೆದಾರನಿಗೆ ಹೇಗೆ ಹಣ ಪಾವತಿ ಮಾಡಿದ್ದೀರಿ ಎಂದು ಅಮೀನ್ ಮೊಹಿಸಿನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಗುತ್ತಿಗೆದಾರನಿಗೆ ಈಗಾಗಲೇ 70 ಲಕ್ಷ ರು.. ಬಿಡುಗಡೆ ಮಾಡಲಾಗಿದೆ. ಅವರನ್ನು ಕರೆಯಿಸಿ ಗುಣಮಟ್ಟದ ಕೆಲಸ ಮಾಡುವಂತೆ ಸೂಚಿಸಲಾಗುವುದು. ಅಲ್ಲಿಯ ತನಕ ಉಳಿದ ಮೊತ್ತ ತಡೆಹಿಡಿಯಲಾಗುವುದು ಎಂದರು.ಪಾರ್ಕಿಂಗ್ ಶುಲ್ಕ ಸಂಗ್ರಹ ಸ್ಥಗಿತ : ಪ್ರವಾಸಿ ತಾಣ ರಾಜಾಸೀಟು ರಸ್ತೆಯನ್ನು ಪಾರ್ಕಿಂಗ್ ಶುಲ್ಕ ಸಂಗ್ರಹವನ್ನು ಸ್ಥಗಿತಗೊಳಿಸಿರುವ ಬಗ್ಗೆ ತೀವ್ರ ಚರ್ಚೆ ನಡೆಯಿತು. ಸದಸ್ಯ ಅಮಿನ್ ಮೊಹಿಸಿನ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯ ಕೆ.ಎಸ್. ರಮೇಶ್ ಧ್ವನಿಗೂಡಿಸಿ ಮಾಹಿತಿ ನೀಡುವಂತೆ ಆಗ್ರಹಿಸಿದರು. ಕೌನ್ಸಿಲ್ ಕಾರ್ಯದರ್ಶಿ ತಾಹಿರ್ ಪ್ರತಿಕ್ರಿಯಿಸಿ ರು.37 ಲಕ್ಷಕ್ಕೆ ಟೆಂಡರ್ ನೀಡಲಾಗಿದೆ. ಆದರೆ ಟೆಂಡರ್ ದಾರರು ರು.17 ಲಕ್ಷ ಮಾತ್ರ ನೀಡಿದ್ದಾರೆ. ಸುಮಾರು ರು.20 ಲಕ್ಷ ಹಣ ಬಾಕಿ ಪಾವತಿ ಮಾಡಬೇಕಾಗಿರುವುದರಿಂದ ವಸೂಲಾತಿ ಸ್ಥಗಿತಕ್ಕೆ ಆದೇಶಿಸಿ ನೋಟೀಸ್ ನೀಡಲಾಗಿದೆ ಎಂದರು.