‘ಅಮೃತ್ 2’ ಜಾರಿಗೆ ತಂದಿದ್ದರೂ ಜನತೆಗೆ ಪ್ರಯೋಜನವಿಲ್ಲ: ಕೆ.ಎಂ. ಗಣೇಶ್

KannadaprabhaNewsNetwork |  
Published : Oct 30, 2025, 02:30 AM IST
ಜನತೆ | Kannada Prabha

ಸಾರಾಂಶ

ಅಮೃತ 2 ಯೋಜನೆ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ನಗರಸಭೆ ಸದಸ್ಯರು ತುರ್ತು ಸಭೆ ನಡೆಸಿ ಇದರ ಲಾಭ ನಷ್ಟದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿ ಎಂದು ಮಾಜಿ ಸದಸ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ನಗರದಲ್ಲಿ ಅಮೃತ್-2 ಯೋಜನೆಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ನಗರಸಭೆ ಸದಸ್ಯರು ತುರ್ತು ಸಭೆ ನಡೆಸಿ ಇದರ ಲಾಭ-ನಷ್ಟದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿ ಎಂದು ನಗರಸಭೆ ಮಾಜಿ ಸದಸ್ಯ ಕೆ.ಎಂ ಗಣೇಶ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ನಗರ ಪುನರುಜ್ಜೀವನ ಮತ್ತು ಜಲ ಸಂರಕ್ಷಣೆಗಾಗಿ ಅಮೃತ್ 2 ಯೋಜನೆ ಜಾರಿಗೆ ತಂದಿದ್ದರೂ, ಮಡಿಕೇರಿ ನಗರದ ಜನತೆಗೆ ಈ ಯೋಜನೆಯಿಂದ ಮೂರು ಕಾಸಿನ ಪ್ರಯೋಜನವಿಲ್ಲ. ರಸ್ತೆಗಳನ್ನು ಅಗೆದು ಹಾಳು ಮಾಡಲಾಗ್ತಿದೆ. ಸರ್ಕಾರದ ಹಣ ಪೋಲಾಗ್ತಿದೆ. ಬಯಲು ಸೀಮೆಯಾದರೆ ಸಮತಟ್ಟು ಪ್ರದೇಶವಾಗಿರುವುದರಿಂದ ಸಮಸ್ಯೆ ಉಂಟಾಗೋದಿಲ್ಲ. ಮಡಿಕೇರಿ ಗುಡ್ಡಗಾಡು ಪ್ರದೇಶವಾದ್ರಿಂದ ಹಲವು ಬಡಾವಣೆಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

49 ಕೋಟಿ ರು. ವೆಚ್ಚದಲ್ಲಿ ನಡೆದ ಯುಜಿಡಿ ಕಾಮಗಾರಿಯಿಂದ ಇಡೀ ನಗರದ ರಸ್ತೆಗಳು ಹಾಳಾಗಿವೆ. ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ನಡೆಯದಿದ್ದರೂ ಬಿಲ್ ಮಾಡಿಸಿದ್ದಾರೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಸರ್ಕಾರದ ಹಣವನ್ನು ನುಂಗಿದ್ದಾರೆ. ಯಾರ ಮೇಲೆ ಕೇಸ್ ದಾಖಲಿಸುವುದು ಎಂದು ಪ್ರಶ್ನಿಸಿರುವ ಕೆ.ಎಂ ಗಣೇಶ್, 38 ಕೋಟಿ ವೆಚ್ಚದ ಅಮೃತ್ 2 ಯೋಜನೆ ಅನುಷ್ಠಾನಗೊಳಿಸುವ ಬದಲು ಅದೇ ಹಣದಲ್ಲಿ ರಸ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಬಹುದಿತ್ತು. ‘ಅಮೃತ ಅತಿಯಾದರೆ ವಿಷ’ ಎಂಬ ಮಾತಿನಂತೆ ಈ ಯೋಜನೆಯಿಂದಾಗಿ ಸಮಸ್ಯೆಗಳೇ ಹೆಚ್ಚಿದೆ. ಈ ಅವೈಜ್ಞಾನಿಕ ಯೋಜನೆಯನ್ನು ರದ್ದುಗೊಳಿಸುವುದು ಸೂಕ್ತ ಎಂದಿದ್ದಾರೆ. ನಗರಸಭೆಯಲ್ಲಿ ಹಿರಿಯ ಸದಸ್ಯರಿದ್ದು, ಸಭೆ ನಡೆಸಿ ಈ ಯೋಜನೆಯ ಕುರಿತು ಗಂಭೀರ ಚರ್ಚೆ ನಡೆಸಬೇಕು. ಲಾಭ-ನಷ್ಟದ ಬಗ್ಗೆ ಅಭಿಪ್ರಾಯ ವ್ಯಕ್ತವಾಗಬೇಕು. ಜನತೆಗೆ ಸಮಸ್ಯೆಯಾಗದಂತೆ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೆ.ಎಂ ಗಣೇಶ್ ಸಲಹೆ ನೀಡಿದರು.

ದಸರಾ ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಮಲ್ಲಿಕಾರ್ಜುನ ನಗರದ ಅಂಗನವಾಡಿ ಕೇಂದ್ರದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿ ಆರೇಳು ವರ್ಷ ಕಳೆದರೂ, ಇದುವರೆಗೂ ನೀರು ಪೂರೈಕೆಯಾಗದೆ ತುಕ್ಕು ಹಿಡಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ ಕೃಷ್ಣರಾಜು, ಕೋದಂಡರಾಮ ದೇವಾಲಯ ಟ್ರಸ್ಟಿ ಅನಿಲ್ ಕೃಷ್ಣಾನಿ, ವನಚಾಮುಂಡಿ ದೇವಾಲಯ ಸಮಿತಿ ಅಧ್ಯಕ್ಷ ಸುನಿಲ್, ಕೋದಂಡರಾಮ ದೇವಾಲಯ ದಸರಾ ಸಮಿತಿ ಅಧ್ಯಕ್ಷ ಜಗದೀಶ್ ಹಾಜರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು