ಹೂವಿನಹಡಗಲಿ; ತಾಲೂಕಿನ ಬೀರಬ್ಬಿ ಬಳಿಯ ಮೈಲಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳಿಂದ ಟ್ರಾಫಿಕ್ ಜಾಮ್ ಉಂಟಾಗಿ ಬೀರಬ್ಬಿಗೆ ಬಸ್ಸುಗಳೇ ಹೋಗುತ್ತಿಲ್ಲ. ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರ ನಡೆದು ಊರು ಸೇರುವ ಪರಿಸ್ಥಿತಿ ಎದುರಾಗಿದೆ.ಹೌದು, ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ನಿರ್ಮಾಣವಾಗಿರುವ ಮೈಲಾರ ಸಕ್ಕರೆ ಕಾರ್ಖಾನೆಗೆ ತಾಲೂಕಿನ ವಿವಿಧ ಹಳ್ಳಿಗಳಿಂದ ಲಾರಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಅಡ್ಡಾದಿಡ್ಡಿ ಕಬ್ಬು ತುಂಬಿಕೊಂಡು ಬರುತ್ತಾರೆ. ಕಾರ್ಖಾನೆ ಒಳಗೆ ಹೋಗಲು ಮುಖ್ಯ ರಸ್ತೆ ಮತ್ತು ಬೀರಬ್ಬಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಬಳಕೆ ಮಾಡುತ್ತಾರೆ. ಬೀರಬ್ಬಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ತುಂಬೆಲ್ಲಾ ಟ್ಯಾಕ್ಟ್ರರ್, ಲಾರಿಗಳಿಂದ ಟ್ರಾಫಿಕ್ ಜಾಮ್ ಮಾಡುತ್ತಾರೆ. ಗ್ರಾಮದೊಳಗೆ ಬಸ್ಸು ಹೋಗಲು ರಸ್ತೆಯೇ ಇಲ್ಲ ಇದರಿಂದ ಬಸ್ಸಿನ ಚಾಲಕರು ರೋಸಿ ಹೋಗಿದ್ದಾರೆ. ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳನ್ನು ನಡು ರಸ್ತೆಯಲ್ಲೇ ಇಳಿಸುತ್ತಾರೆ. ವಿಧಿ ಇಲ್ಲದೇ ಜನ 2 ಕಿ.ಮೀ ದೂರ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ನಡೆದು ಹೋಗುತ್ತಾರೆ.
ಈ ಸಕ್ಕರೆ ಕಾರ್ಖಾನೆ ಟ್ರಾಫಿಕ್ ಜಾಮ್ ಮಾಡುತ್ತಿರುವುದರಿಂದ ಬೀರಬ್ಬಿ, ಅರಳಿಹಳ್ಳಿ, ಅಂಗೂರು, ಅರಳಿಹಳ್ಳಿ ತಾಂಡಕ್ಕೆ ಹೋಗುವ ಜನ ಪರದಾಡುತ್ತಿದ್ದಾರೆ. ಈ ಕುರಿತು ತಹಸೀಲ್ದಾರ್, ಪೊಲೀಸ್ ಇಲಾಖೆ ಗಮನಕ್ಕೆ ತಂದರೂ ಯಾರು ಕ್ರಮ ಕೈಗೊಂಡಿಲ್ಲ. ಈ ವ್ಯವಸ್ಥೆ ಬೇಗನೆ ಸರಿಪಡಿಸದಿದ್ದರೆ ಕಾರ್ಖಾನೆಗೆ ಮುತ್ತಿಗೆ ಹಾಕುತ್ತೇವೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ಕಳೆದೊಂದು ವಾರದಿಂದ ಗ್ರಾಮಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ. ಸಾರಿಗೆ ವ್ಯವಸ್ಥಾಪಕರನ್ನು ಕೇಳಿದರೆ, ನಿಮ್ಮೂರಿನ ರಸ್ತೆಯಲ್ಲಿನ ಕಬ್ಬು ತುಂಬಿರುವ ಟ್ರ್ಯಾಕ್ಟರ್ ತೆರವು ಮಾಡಿ ಬಂದು, ಬಸ್ಸು ಕೇಳಿ ಅಲ್ಲಿವರೆಗೂ ನಿಮ್ಮೂರಿಗೆ ಬಸ್ಸಿನ ಸೌಲಭ್ಯ ನೀಡಲು ಆಗುವುದಿಲ್ಲ, ಕಿರಿದಾದ ರಸ್ತೆಯಲ್ಲಿ ಸ್ವಲ್ಪ ಯಮಾರಿದರೇ ಬಸ್ಸು ಉರುಳಿ ಬೀಳುವ ಸಾಧ್ಯತೆ ಹೆಚ್ಚು, ಇದರಿಂದ ಅಪಾಯವಾದರೇ ಯಾರು ಜವಾಬ್ದಾರರು ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಗ್ರಾಮಸ್ಥರ ಮಾತು.
ಬೀರಬ್ಬಿಯಿಂದ ಅರಳಿಹಳ್ಳಿಗೆ ಹೋಗುವ ಮಾರ್ಗದಲ್ಲಿಕಬ್ಬು ಕಟಾವು ಮಾಡುವ ಕಾರ್ಮಿಕರು ರಸ್ತೆಯಲ್ಲೇ ಟ್ಯಾಕ್ಟ್ರರ್ ನಿಲ್ಲಿಸಿದರಿಂದ ರಸ್ತೆ ಬದಿಯಲ್ಲಿ ಸಾರಿಗೆ ಬಸ್ಸು ಮಣ್ಣಿನಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಆದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಪ್ರಯಾಣಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಪಟ್ಟಣ ಪ್ರದೇಶಕ್ಕೆ ಹೋಗಲು ಅನುಕೂಲ ಮಾಡಬೇಕೆಂದು ಜನ ಒತ್ತಾಯಿಸಿದ್ದಾರೆ.ಮೈಲಾರ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಿಗೆ ಬೀರಬ್ಬಿ ರಸ್ತೆಯಲ್ಲಿ, ಟ್ಯಾಕ್ಟ್ರರ್ ನಿಲುಗಡೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಟ್ಯಾಕ್ಟ್ರರ್‌ನಲ್ಲಿ ಅಡ್ಡಲಾಗಿ ಕಬ್ಬು ಸಾಗಾಣೆ ಮಾಡಿದರೆ ದಂಡ ವಿಧಿಸುತ್ತೇವೆ. ಈ ಕುರಿತು ಸಭೆ ಕರೆಯಲಾಗಿದೆ ಎನ್ನುತ್ತಾರೆ ಹಿರೇಹಡಗಲಿ ಪೊಲೀಸ್ ಠಾಣೆ ಪಿಎಸ್‌ಐ ಭರತ್ ಪ್ರಕಾಶ.
ನಿತ್ಯ ಮಧ್ಯಾಹ್ನದ ಹೊತ್ತಿಗೆ ಬೀರಬ್ಬಿ ರಸ್ತೆಯ ತುಂಬೆಲ್ಲಾ ಟ್ಯಾಕ್ಟ್ರರ್ ಲಾರಿಗಳಿಂದ ತುಂಬಿರುತ್ತದೆ. ಬಸ್ಸುಗಳ ಓಡಾಟಕ್ಕೆ ತೊಂದರೆಯಾಗಿ, ನಡು ರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸುತ್ತಾರೆ, ಇದರಿಂದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ ಎನ್ನುತ್ತಾರೆ ಬೀರಬ್ಬಿ ಗ್ರಾಮಸ್ಥ ಮಲ್ಲಿಕಾರ್ಜುನ.