ಬೆಂಬಲ ಬೆಲೆ ಯೋಜನೆಯಡಿ ಬತ್ತ, ರಾಗಿ ಖರೀದಿ

KannadaprabhaNewsNetwork |  
Published : Oct 30, 2025, 02:30 AM IST

ಸಾರಾಂಶ

ಕೇಂದ್ರ ಸರ್ಕಾರದ ಆದೇಶದಂತೆ 2025-26ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬತ್ತ ಹಾಗೂ ರಾಗಿ ಖರೀದಿ ಮಾಡಲಾಗುತ್ತಿದೆ. ಈ ಅವಕಾಶ ಸದ್ಬಳಕೆಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

‘ಸರ್ಕಾರದ ಬೆಂಬಲ ಬೆಲೆಯಡಿ ಜಿಲ್ಲೆಯಲ್ಲಿ ಬತ್ತ ಹಾಗೂ ರಾಗಿಯನ್ನು ಖರೀದಿ ಮಾಡಲಾಗುತ್ತಿದ್ದು, ಈ ಸಂಬಂಧ ರೈತರ ಹೆಸರು ನೋಂದಣಿ ಕಾರ್ಯ ಈಗಾಗಲೇ ಆರಂಭವಾಗಿದ್ದು, ಜಿಲ್ಲೆಯ ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕೋರಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2025-26 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬುಧವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಆದೇಶದಂತೆ 2025-26 ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬತ್ತ ಹಾಗೂ ರಾಗಿ ಖರೀದಿ ಮಾಡಲಾಗುತ್ತಿದ್ದು, ಈ ಅವಕಾಶ ಸದ್ಬಳಕೆಗೆ ಮನವಿ ಮಾಡಿದರು.

ಬೆಂಬಲ ಬೆಲೆಯಡಿ ಖರೀದಿ:

ಜಿಲ್ಲೆಯಲ್ಲಿ ಬತ್ತ ಮತ್ತು ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿದ್ದು, ಆಹಾರ, ನಾಗರಿಕ ಸರಬರಾಜು ನಿಗಮ ನಿಯಮಿತರವರನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 05 ಕಡೆಗಳಲ್ಲಿ ಮಡಿಕೇರಿ ಎಪಿಎಂಸಿ ಆವರಣ, ಕುಶಾಲನಗರ ಎಪಿಎಂಸಿ ಆವರಣ, ಗೋಣಿಕೊಪ್ಪ ಎಪಿಎಂಸಿ ಆವರಣ ಹಾಗೂ ಸೋಮವಾರಪೇಟೆ ಎಪಿಎಂಸಿ ಮಾರ್ಕೇಟ್ ಆವರಣದಲ್ಲಿ ಮತ್ತು ವಿರಾಜಪೇಟೆ ಪಟ್ಟಣದ ತಾಲೂಕು ಕೃಷಿ ಇಲಾಖೆ ಕಚೇರಿಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದು, ರೈತರು ನೋಂದಣಿ ಕೇಂದ್ರಗಳಲ್ಲಿಯೇ ತಮ್ಮ ಬತ್ತ ನೀಡುವಂತಾಗಬೇಕು ಎಂದರು.

ರೈತರ ನೋಂದಣಿ ತಾಂತ್ರಿಕ ತೊಂದರೆಗಳು ಕಂಡುಬಂದಲ್ಲಿ ಕೂಡಲೇ ಸರಿಪಡಿಸಬೇಕು. ಆ ನಿಟ್ಟಿನಲ್ಲಿ ಕೃಷಿಕರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಬತ್ತದ ಹಾಗೂ ರಾಗಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ಫ್ರೂಟ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಎನ್‍ಪಿಸಿಐ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಿದೆ ಎಂದು ಅವರು ತಿಳಿಸಿದರು.

ಬತ್ತದ ಖರೀದಿ ನೋಂದಣಿ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ, ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೋಂದಣಿ ಕೇಂದ್ರಗಳು ಹಾಗೂ ಬತ್ತ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಅವರು ಖರೀದಿ ಏಜೆನ್ಸಿಯವರಿಗೆ ತಿಳಿಸಿದರು.

ಖರೀದಿ ಪ್ರಕ್ರಿಯೆ:

ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಮಂಟೇಸ್ವಾಮಿ ಅವರು ಮಾಹಿತಿ ನೀಡಿ ಕೆಲವೇ ದಿನಗಳಲ್ಲಿ ಬತ್ತ/ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಸಾಮಾನ್ಯ ಬತ್ತ ಪ್ರತಿ ಕ್ವಿಂಟಾಲ್ ಗೆ 2369 ರು. ನಿಗದಿಪಡಿಸಲಾಗಿದ್ದು, ರಾಗಿ ಪ್ರತಿ ಕ್ವಿಂಟಲ್ ಗೆ 4886 ರು. ನಿಗದಿಪಡಿಸಲಾಗಿದೆ ಎಂದರು.

ಭತ್ತವನ್ನು ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು, ತಾವು ಬೆಳದ ಬತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ಸರಕಾರವು ಪೌಷ್ಟಿಕಾಂಶತೆಯಿಂದ ಕೂಡಿದ ಸಾರವರ್ದಿತ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಅಕ್ಕಿ ಗಿರಣಿಗಳಲ್ಲಿ ಹಲ್ಲಿಂಗ್ ಮಾಡುವಾಗ ಸಾರವರ್ದಿತ ಅಕ್ಕಿಯನ್ನು ತಯಾರು ಮಾಡಲು ಕಡ್ಡಾಯವಾಗಿ ಅಕ್ಕಿ ಗಿರಣಿ ಮಾಲೀಕರುಗಳು ಬ್ಲೆಂಡಿಂಗ್ ಮಿಷನ್ ಅನ್ನು ಅಳವಡಿಸಲು ಹಾಗೂ ಅಳವಡಿಸದ ಅಕ್ಕಿಗಿರಣಿಗಳಿಗೆ ಸರಕಾರದ ಆದೇಶದಂತೆ ಹಲ್ಲಿಂಗ್ ಗೆ ಬತ್ತವನ್ನು ನೀಡಲು ಸಾಧ್ಯವಿರುವುದಿಲ್ಲ ಎಂದು ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಡಿ.ಎಸ್.ಸೋಮಶೇಖರ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕರಾದ ಹಂಪಣ್ಣ, ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಕಿರಣ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರಾದ ಎಚ್.ಎಂ.ನಾಗನಾಯ್ಕ, ಎಪಿಎಂಸಿ ಕಾರ್ಯದರ್ಶಿ ಅನಿಲ್, ಆಹಾರ ನಿರೀಕ್ಷಕರಾದ ಯಶಸ್ವಿನಿ, ಸ್ವಾತಿ, ವೀಣಾ, ಪಿ.ಆರ್.ನೀನಾಕುಮಾರಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕರಾದ ನರೇಂದ್ರ, ಮೈಕಲ್, ಕಿರಣ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ