ರಾಮನಗರ ನಗರಸಭೆ ಗ್ರೇಡ್‌ -1 ಮೇಲ್ದರ್ಜೆಗೇರಿಸಲು ಪ್ರಸ್ತಾವನೆ

KannadaprabhaNewsNetwork | Published : Jan 28, 2025 12:46 AM

ಸಾರಾಂಶ

ರಾಮನಗರ: ಜಿಲ್ಲಾ ಕೇಂದ್ರದಲ್ಲಿರುವ ರಾಮನಗರ ನಗರಸಭೆಯನ್ನು ಗ್ರೇಡ್‌-1 ಮೇಲ್ದರ್ಜೆಗೇರಿಸಲು ಹಾಗೂ ನಗರದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲುಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಮನಗರ: ಜಿಲ್ಲಾ ಕೇಂದ್ರದಲ್ಲಿರುವ ರಾಮನಗರ ನಗರಸಭೆಯನ್ನು ಗ್ರೇಡ್‌-1 ಮೇಲ್ದರ್ಜೆಗೇರಿಸಲು ಹಾಗೂ ನಗರದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲುಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶೇಷಾದ್ರಿ ಮಾತನಾಡಿ, ರಾಮನಗರ ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದು, ಭವಿಷ್ಯದಲ್ಲಿ ದೊಡ್ಡಮಟ್ಟದಲ್ಲಿ ಬೆಳವಣಿಗೆ ಹೊಂದಲಿದೆ. ಹಾಗಾಗಿ ನಗರಸಭೆಯನ್ನು ಗ್ರೇಡ್-1 ಮೇಲ್ದರ್ಜೆಗೇರಿಸಿದರೆ ಹೆಚ್ಚಿನ ಅನುಕೂಲಗಳಾಗಲಿವೆ. ಈ ಕುರಿತು ಸಭೆಯ ಒಪ್ಪಿಗೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿ ಚರ್ಚೆಗೆ ಅನುವು ಮಾಡಿಕೊಟ್ಟರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯರು, ಈ ಕೆಲಸ ತುರ್ತಾಗಿ ಆಗಬೇಕೆಂದು ತಮ್ಮ ಒಪ್ಪಿಗೆ ಸೂಚಿಸಿದರು. ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ, ನಗರಸಭೆಯ ಕಾರ್ಯವೈಖರಿ ಹಾಗೂ ನಗರದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಆಗುತ್ತಿರುವ ಬದಲಾವಣೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಆಗ ಶೇಷಾದ್ರಿ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರ ಸಹಕಾರದಿಂದ ಈಗಾಗಲೇ ಸ್ವಚ್ಛತಾ ಕಾರ್ಯದಲ್ಲಿ ಮಹತ್ತರ ಬದಲಾವಣೆಯಾಗಿದೆ. ಜನರು ಬೆಳಿಗ್ಗೆ ರಸ್ತೆಗಿಳಿಯುವ ಮುಂಚೆಯೇ ಸ್ವಚ್ಛತಾ ಕೆಲಸ ಮುಗಿಯುತ್ತಿದೆ. ಮುಂದೆ ನಗರಾದ್ಯಂತ ಜಂಗಲ್ ಸ್ವಚ್ಛತೆ ಕೈಗೊಳ್ಳಲಾಗುವುದು. ಜೊತೆಗೆ, ಖಾಲಿ ನಿವೇಶನಗಳಲ್ಲಿರುವ ಕಸ ಹಾಗೂ ಗಿಡಗಂಟಿ ತೆರವು ಮಾಡಲಾಗುವುದು ಎಂದರು.

ಸದಸ್ಯರ ಆಕ್ಷೇಪ:

ನಗರದ ಕಂದಾಯ ಭವನದ ದುರಸ್ತಿಗೆ ನಗರಸಭೆಯಿಂದ 15 ಲಕ್ಷ ಖರ್ಚು ಮಾಡಿರುವುದಕ್ಕೆ ಜೆಡಿಎಸ್ ಸದಸ್ಯ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ನಗರಸಭೆಗೆ ಸಂಬಂಧಪಡದ ಕಟ್ಟಡಕ್ಕೆ ನಮ್ಮ ಹಣ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೇಷಾದ್ರಿ, ಹಿಂದಿನ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ತಮ್ಮ ಪರಮಾಧಿಕಾರ ಬಳಸಿ ಹಣ ವ್ಯಯಿಸಿದ್ದಾರೆ. ಪರ್ಯಾಯವಾಗಿ ಮುಂದೆ ನಗರಸಭೆಗೆ ಬೇರೆ ವ್ಯವಸ್ಥೆ ಮಾಡುತ್ತಾರೆಂದು ಭರವಸೆ ನೀಡಿದ್ದಾರೆಂದು ಹೇಳಿದರು.

ನಗರಸಭೆ ವ್ಯಾಪ್ತಿಯಲ್ಲಿ ಕಸ‌ ಸಂಸ್ಕರಣೆ ಮಾಡಲು ಎಂ.ಆರ್.ಎಫ್ ಶೆಡ್ ನಿರ್ಮಾಣ ಮಾಡಬೇಕೆಂದು ಸದಸ್ಯ ಮಂಜುನಾಥ್ ಹೇಳಿದಾಗ ಎಂಜಿನಿಯರ್ ಸುಬ್ರಹ್ಮಣ್ಯ ಎಂಆರ್‌ಎಫ್ ನಲ್ಲಿ ಒಣ ಕಸ ಯಂತ್ರೋಪಕರಣಗಳ ಮೂಲಕ ವಿಂಗಡಿಸಿ ಅದನ್ನು ಮರುಬಳಕೆ ಮಾಡುವ ಯೋಜನೆಗೆ ಮಾನವ ಸಂಪನ್ಮೂಲ ಕೊರತೆ ಇದೆ. ಇನ್ನೂ ಕಸ ವಿಂಗಡಣೆ ಆಗದಿರುವ ಸಮಸ್ಯೆ ಸಹ ಇದೆ ಎಂದು ಹೇಳಿದರು.

ಆಯುಕ್ತ ಜಯಣ್ಣ ಮಾತನಾಡಿ, ಹರಿಸಂದ್ರದ ಕಸ ವಿಲೇವಾರಿ ಘಟಕದಲ್ಲಿ ಸಂಸ್ಕರಣೆ ಮಾಡಿ, ಗೊಬ್ಬರ ಮಾಡಲು ಯೋಜನೆ ರೂಪಿಸಲಾಗಿದೆ. ಅದೇ ಜಾಗದಲ್ಲಿ ಎಂಆರ್‌ಎಫ್ ಗೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಡಿಪಿಆರ್ ತಯಾರಿಸಲು ಸೂಚನೆ ಬಂದಿದೆ ಎಂದಾಗ ಸದಸ್ಯ ಮಂಜುನಾಥ್, ವಿಲೇವಾರಿ ಜಾಗದಲ್ಲಿ ಮೊದಲು ಕಾಂಪೌಂಡ್ ಹಾಕಿ ಬಂದೋಬಸ್ತ್ ಮಾಡಿ ವಾಸನೆ ಬಾರದಂತೆ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರು ಉಪಸ್ಥಿತರಿದ್ದರು.

27ಕೆಆರ್ ಎಂಎನ್ 9.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

Share this article