ಶಾಲೆ ಮತ್ತು ರಸ್ತೆಗಳ ದುರಸ್ತಿಗೆ ಅನುದಾನ ಕೋರಿ ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Apr 24, 2025, 11:50 PM IST
24ಕೆಎಂಎನ್ ಡಿ22 | Kannada Prabha

ಸಾರಾಂಶ

ಮನವಿಗೆ ಸ್ಪಂದಿಸಿರುವ ಶಿಕ್ಷಣ ಸಚಿವರು 2 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಅನುದಾನದಲ್ಲೇ ಶಾಲೆಗಳ ದುರಸ್ತಿ, ಶೌಚಾಲಯಗಳ ನಿರ್ಮಾಣ ಸೇರಿದಂತೆ ಸೌಲಭ್ಯ ಕಲ್ಪಿಸಲು ಬಳಕೆ ಮಾಡಲಾಗುವುದು. ಮುಂದಿನ ದಿನಗಳಲ್ಲೂ ಸಹ ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಅನುದಾನ ತಂದು ಶಾಲೆಗಳ ಅಭಿವೃದ್ಧಿ ಪಡಿಸಲಾಗುವುದು.

ಕನ್ನಡ ಪ್ರಭ ವಾರ್ತೆ ಮದ್ದೂರು

ವಿಧಾನಸಭಾ ಕ್ಷೇತ್ರದ ಗ್ರಾಮೀಣ ಶಾಲೆ ಮತ್ತು ರಸ್ತೆಗಳ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಹೇಳಿದರು.

ತಾಲೂಕಿನ ಅರುವನಹಳ್ಳಿಯಲ್ಲಿ 29 ಲಕ್ಷ ರು. ವೆಚ್ಚದಲ್ಲಿ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣ ಹಾಗೂ 95 ಲಕ್ಷ ರು. ವೆಚ್ಚದಲ್ಲಿ ಕಬ್ಬಾರೆ ಮತ್ತು ನೀಲಕಂಠನಹಳ್ಳಿ ರಸ್ತೆ ಮರು ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದ ಹಲವು ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚೆ ನಡೆಸಿ ದುರಸ್ತಿಗೆ ವಿಶೇಷ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದೆ ಎಂದರು.

ಮನವಿಗೆ ಸ್ಪಂದಿಸಿರುವ ಸಚಿವರು 2 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಅನುದಾನದಲ್ಲೇ ಶಾಲೆಗಳ ದುರಸ್ತಿ, ಶೌಚಾಲಯಗಳ ನಿರ್ಮಾಣ ಸೇರಿದಂತೆ ಸೌಲಭ್ಯ ಕಲ್ಪಿಸಲು ಬಳಕೆ ಮಾಡಲಾಗುವುದು. ಮುಂದಿನ ದಿನಗಳಲ್ಲೂ ಸಹ ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಅನುದಾನ ತಂದು ಶಾಲೆಗಳ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಕ್ಷೇತ್ರದ ಗ್ರಾಮೀಣ ರಸ್ತೆಗಳು ಕಳೆದ ಹಲವು ವರ್ಷಗಳಿಂದ ಹಳ್ಳ, ಗುಂಡಿಗಳು ಬಿದ್ದು ಜನ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಸಂಬಂಧ ಲೋಕೋಪಯೋಗಿ ಸಚಿವರು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ರಸ್ತೆಗಳ ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದೆ. ಈಗ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಹನುಮಂತು, ಬೆಳ್ಳೂರು ಗ್ರಾಪಂ ಅಧ್ಯಕ್ಷ ಕೆಂಪರಾಜು, ಸದಸ್ಯರಾದ ರಾಘವೇಂದ್ರ, ಶೈಲಜಾ, ಬೀರೇಶ ಹಾಗೂ ಮುಖಂಡರು ಇದ್ದರು.ಹಿಂದೂಗಳ ನರಮೇಧ ಖಂಡನೀಯ: ಉದಯ್

ಮದ್ದೂರು:

ಕಾಶ್ಮೀರದ ತಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ನರಮೇಧ ಖಂಡನೀಯ. ಇಂತಹ ಭಯೋತ್ಪಾದನೆ ಮಟ್ಟ ಹಾಕಲು ಹಿಂದೂ ಜನಾಂಗ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಹೇಳಿದರು.

ಭಯೋತ್ಪಾದಕ ದಾಳಿ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದೇಶದ ರಕ್ಷಣೆ ವಿಚಾರದಲ್ಲಿ ಹಿಂದುಗಳು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಕೇಂದ್ರ ಸರ್ಕಾರ ಭಯೋತ್ಪಾದಕರನ್ನು ಮಟ್ಟ ಹಾಕುವ ಮೂಲಕ ಭಾರತದ ಶಕ್ತಿ ತೋರಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದರು.

ಪುಲ್ವಾಮಾ, ಬಾಗಕೋಟ್ ಮತ್ತು ಪಹಲ್ಗಾಮ್ ನಂತಹ ಘಟನೆಗಳಿಗೆ ಭಾರತ ಇತಿಶ್ರೀ ಹಾಡಬೇಕಾದರೆ ಪಾಕ್ ಗಡಿಯಲ್ಲಿ ಬೀಡು ಬಿಟ್ಟಿರುವ ಉಗ್ರರ ಅಡಗು ತಾಣದ ಮೇಲೆ ಭಾರತೀಯ ರಕ್ಷಣಾ ಪಡೆ ಸರ್ಜಿಕಲ್ ದಾಳಿ ನಡೆಸುವುದೊಂದೆ ಉಳಿದ ಮಾರ್ಗ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?