ಅಂಬೇಡ್ಕರ್ ಜನ್ಮದಿನ ಜ್ಞಾನದ ದಿನವಾಗಿದೆ: ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್

KannadaprabhaNewsNetwork | Published : Apr 24, 2025 11:50 PM

ಸಾರಾಂಶ

ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಿಶ್ರಾಂತಿ ಗೃಹವನ್ನು ಉದ್ಘಾಟಿಸಲಾಯಿತು, ಅಕಾಲಿಕ ಮರಣಕ್ಕೀಡಾದ ವಕೀಲ ಮಹೇಶ್ ಅವರ ಕುಟುಂಬಕ್ಕೆ ಪರಿಹಾರ ವಿತರಿಸಲಾಯಿತು, ಹಿರಿಯ ವಕೀಲ ಮುನಿಸುವ್ರತ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ನಂಜನಗೂಡುಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಇಡೀ ವಿಶ್ವವೇ ಜ್ಞಾನದ ದಿನವನ್ನಾಗಿ ಆಚರಣೆ ನಡೆಸುತ್ತಿದೆ, ಆದರೆ ನಮ್ಮ ದೇಶದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಿ ಜಾತಿ ನಾಯಕನನ್ನಾಗಿ ಬಿಂಬಿಸಿರುವುದು ದುರದೃಷ್ಟಕರ ಸಂಗತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ, ಎಲ್ಲರಲ್ಲೂ ಸಮಾನತೆ ಸಾಮಾಜಿಕ ನ್ಯಾಯವನ್ನು ಮನಸ್ಸಿನಲ್ಲಿ ಜಾಗೃತಗೊಳಿಸಿ ಚಿಂತನಾ ಕ್ರಾಂತಿಯನ್ನು ಮೂಡಿಸುವ ದಿನವಾಗಿದೆ. ಅಂಬೇಡ್ಕರ್ ಅವರು ಕೇವಲ ಭಾಗ್ಯದ ಬಲದಿಂದ ವಿಶ್ವ ವಿಖ್ಯಾತರಾದವರಲ್ಲ, ಬದಲಾಗಿ ಅವರ ವಿಶೇಷ ವ್ಯಕ್ತಿತ್ವ, ಆಳವಾದ ಅಧ್ಯಯನ, ಅನುಪಮ ಪಾಂಡಿತ್ಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಜೀವನದುದ್ದಕ್ಕೂ ನಡೆಸಿದ ಹೋರಾಟದಿಂದಾಗಿ ವಿಶ್ವವಿಖ್ಯಾತಿಯನ್ನು ಗಳಿಸಿದವರು ಎಂದರು.ಪ್ರಧಾನ ನ್ಯಾಯಾಧೀಶ ಡಿ. ಕಮಲಾಕ್ಷ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣದಿಂದ ಮಾತ್ರ ಅಸ್ಪೃಶ್ಯತೆ, ಲಿಂಗ ತಾರತಮ್ಯ ದೂರವಾಗಲು ಸಾಧ್ಯ ಎಂದು ಬಲವಾಗಿ ನಂಬಿದ್ದರು, ಅಲ್ಲದೆ ಜೀವನದ ಉದ್ದಕ್ಕೂ ಅಸ್ಪೃಶ್ಯತೆ, ಲಿಂಗ ತಾರತಮ್ಯದ ವಿರುದ್ಧ ಹೋರಾಟ ನಡೆಸಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ತರಲು ಶ್ರಮಿಸಿದ್ದರು ಎಂದು ತಿಳಿಸಿದರು.ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಇಡೀ ವಿಶ್ವದಲ್ಲೇ ಅತ್ಯಂತ ಸಂವಿಧಾನವನ್ನು ಕೊಡುಗೆಯನ್ನಾಗಿ ನೀಡಿದ್ದಾರೆ ಎಂದು ಹೇಳಿದರು.ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಿಶ್ರಾಂತಿ ಗೃಹವನ್ನು ಉದ್ಘಾಟಿಸಲಾಯಿತು, ಅಕಾಲಿಕ ಮರಣಕ್ಕೀಡಾದ ವಕೀಲ ಮಹೇಶ್ ಅವರ ಕುಟುಂಬಕ್ಕೆ ಪರಿಹಾರ ವಿತರಿಸಲಾಯಿತು, ಹಿರಿಯ ವಕೀಲ ಮುನಿಸುವ್ರತ ಅವರನ್ನು ಸನ್ಮಾನಿಸಲಾಯಿತು.ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಶಿಕಲಾ, ಕೃತಿಕಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ. ಬಸವಣ್ಣ, ಉಪಾಧ್ಯಕ್ಷ ಕೆಂಪರಾಜು, ಸರ್ಕಾರಿ ಅಭಿಯೋಜಕರಾದ ಚಂದ್ರಶೇಖರ್, ಉಮಾಲಕ್ಷ್ಮೀ, ದುರ್ಗಾಶ್ರೀ, ವಕೀಲರಾದ ನಾಗರಾಜಯ್ಯ, ರವಿ, ಶ್ರೀನಿವಾಸ್, ಸೋಮಶೇಖರ್, ಸುರೇಶ್, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

Share this article