ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತಗಟ್ಟೆಗಳ ಪುನರ್ ವಿಂಗಡನೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಡೀಸಿ, 1200ಕ್ಕಿಂತ ಹೆಚ್ಚು ಜನರಿರುವ ಮತಗಟ್ಟೆಗಳು ಹಾಗೂ ಮತದಾರರ ವಾಸ ಸ್ಥಳದಿಂದ 2 ಕಿ.ಮೀ ಗಿಂತಲೂ ಹೆಚ್ಚು ಅಂತರವಿರುವು ಮತಗಟ್ಟೆಗಳನ್ನು ಪುನರ್ ವಿಂಗಡನೆ ಮಾಡಲು, ಜಿಲ್ಲೆಯಲ್ಲಿ 101 ಮತಗಟ್ಟೆಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಯಾವುದೇ ಖಾಸಗಿ ಕಟ್ಟಡಗಳಲ್ಲಿ ಮತಗಟ್ಟೆ ಸ್ಥಾಪನೆ ಮಾಡಿಲ್ಲ. ಎಲ್ಲಾ ಮತಗಟ್ಟೆಗಳನ್ನು ಸರ್ಕಾರಿ ಕಟ್ಟಡಗಳಲ್ಲಿ ಮಾತ್ರ ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳಾದ ಮೇಲುಕೋಟೆ (7), ಶ್ರೀರಂಗಪಟ್ಟಣ (1), ನಾಗಮಂಗಲ (1) ಗಳಲ್ಲಿ ದುರಸ್ತಿಗೊಂಡಿದ್ದ ಒಟ್ಟು ಮತಗಟ್ಟೆಗಳನ್ನು ಬದಲಾವಣೆ ಮಾಡಲು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಮಾಹಿತಿ ತಪ್ಪಿದ್ದರೆ ಸರಿಪಡಿಸಿಕೊಳ್ಳಬಹುದು. 23 ವರ್ಷಗಳ ನಂತರ ರಾಜ್ಯದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ. ಮತದಾರರ ಸಮಗ್ರ ಪರಿಶೀಲನೆ ವೇಳೆ ಪ್ರತಿ ಮನೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದರು.
ಮತದಾರರು ನಮೂನೆಯನ್ನು ಭರ್ತಿ ಮಾಡದೇ ಇದ್ದಲ್ಲಿ ಮತದಾರರ ಪಟ್ಟಿಯಿಂದ ಸದರಿ ಮತದಾರರನ್ನು ನಿಯಮಾನುಸಾರ ಕೈ ಬಿಡಲಾಗುವುದು. ಆದ್ದರಿಂದ ಸದರಿ ಕಾರ್ಯಕ್ರಮವು ಯಾವುದೇ ಲೋಪದೋಷಗಳು ಇಲ್ಲದಂತಹ ಆರೋಗ್ಯಯುತ ಮತದಾರರ ಪಟ್ಟಿ ತಯಾರಿಸಲು ಸಾರ್ವಜನಿಕರು ಹಾಗೂ ಮತದಾರರು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ನಿರ್ವಹಿಸಲು ತಮ್ಮ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ರವಿಶಂಕರ್, ಕಾಂಗ್ರೆಸ್ ಪಕ್ಷದ ಸುಂಡಹಳ್ಳಿ ಮಂಜುನಾಥ್, ಜೆಡಿಎಸ್ ಪಕ್ಷದ ನವೀನ್, ಬಿಎಸ್ಪಿ ದಿನೇಶ್, ಎಎಪಿ ಬೊಮ್ಮಯ್ಯ ಉಪಸ್ಥಿತರಿದ್ದರು.