ಹೂವಿನಹಡಗಲಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಭಾಗ್ಯಲಕ್ಷ್ಮೀ ಯೋಜನೆಯಡಿ ರಾಜ್ಯದಲ್ಲಿ ₹117 ಕೋಟಿ ಹಣ ಮೃತ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ನೀಡುತ್ತೇವೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಈಗಾಗಲೇ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಇದೆ. ಇನ್ಮುಂದೆ ಗ್ರಾಪಂ ಮಟ್ಟದಲ್ಲಿಯೂ ಇಂತಹ ಸಮಿತಿ, ರಚನೆಯ ಚಿಂತನೆ ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆಯಾಗುತ್ತಿದೆ. ಸಾಕಷ್ಟು ಕಡೆಗಳಲ್ಲಿ ಉತ್ತಮ ಯೋಜನೆ ಎಂದು ಪ್ರಶಂಸೆ ವ್ಯಕ್ತವಾಗಿದೆ ಎಂದು ಹೇಳಿದರು.ಹೂವಿನಹಡಗಲಿ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ 10 ವರ್ಷ ಹಿಂದಕ್ಕೆ ಹೋಗಿ, ಶೂನ್ಯ ಸಾಧನೆಯಲ್ಲಿದೆ. ಕೆರೆಗಳಿಗೆ ನೀರು ತುಂಬಿಲ್ಲ, ಸಮರ್ಪಕವಾಗಿ ರೈತರ ಜಮೀನುಗಳಿಗೆ ನೀರು ಹರಿಸಲು ಕಾಲುವೆಗಳಿಗೆ ನೀರಿಲ್ಲ, ಓಡಾಡಲು ಸರಿಯಾಗಿ ರಸ್ತೆ ಇಲ್ಲ, ಒಟ್ಟಾರೆ ಕ್ಷೇತ್ರದ ಹಿತ ಕಾಯುವವರಿಲ್ಲದಂತಾಗಿದೆ ಎಂದು ದೂರಿದರು.
ಕೇಂದ್ರ ಬಿಜೆಪಿ ಸರ್ಕಾರ ನೀಟ್ ಪರೀಕ್ಷೆ ಸರಿಯಾಗಿ ನಡೆಸಿಲ್ಲ, ಇದನ್ನು ವಿರೋಧಿಸಿ ಪ್ರತಿಭಾವಂತ ಯುವಕರು ಪ್ರತಿಭಟನೆ ಮಾಡಿದರೆ, ಕೇಂದ್ರ ಸರ್ಕಾರ ಪೊಲೀಸರ ಮೂಲಕ ಹಲ್ಲೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ದ್ರೋಹ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ ಎಂದು ಹೇಳಿದರು.