ದ.ಕ.ದಲ್ಲಿ ಉಳಿಕೆ ಡಿಸಿ ಮನ್ನಾ ಭೂಮಿ ಹಂಚಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಡಿಸಿ ಮುಲ್ಲೈ ಮುಗಿಲನ್‌

KannadaprabhaNewsNetwork |  
Published : Dec 14, 2024, 12:47 AM IST
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸಭೆ ನಡೆಸುತ್ತಿರುವುದು | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಉಳಿಕೆಯಾಗಿರುವ ಡಿಸಿ ಮನ್ನಾ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ದಲಿತ ಮುಖಂಡರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಕೆಯಾಗಿರುವ 166 ಎಕರೆ (ಡಿಪ್ರೆಸ್ಡ್ ಕ್ಲಾಸ್) ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿ ಪಿಟಿಸಿಎಲ್ ಕಾಯ್ದೆಯಡಿ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ದಲಿತ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಉಳಿಕೆಯಾಗಿರುವ ಡಿಸಿ ಮನ್ನಾ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ದಲಿತ ಮುಖಂಡರು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ದೇವದಾಸ್ ವಿಷಯ ಪ್ರಸ್ತಾಪಿಸಿ, ಬ್ರಿಟಿಷರ ಕಾಲದಲ್ಲಿಯೇ ಪ್ರತಿ ಗ್ರಾಮದಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಡಿಸಿ ಮನ್ನಾ ಭೂಮಿಯನ್ನು ಮೀಸಲಿಟ್ಟು ಹಂಚಿಕೆ ಮಾಡುತ್ತಾ ಬರಲಾಗಿದೆ. ಆದರೆ ಸಾಕಷ್ಟು ದಲಿತ ಕುಟುಂಬಗಳಿಗೆ ಇನ್ನೂ ಈ ಡಿಸಿ ಮನ್ನಾ ಭೂಮಿ ಹಂಚಿಕೆ ಮಾಡಲಾಗಿಲ್ಲ. ಈಗಾಗಲೇ ಸಾಕಷ್ಟು ಭೂಮಿ ಒತ್ತುವಾರಿಯಾಗಿರುವ ಜತೆಗೆ ಅನ್ಯ ಕಾರ್ಯಗಳಿಗೆ ಬಳಕೆಯಾಗಿದೆ. 1970ರಲ್ಲಿ ಭೂ ಮಸೂದೆ ಕಾಯ್ದೆಯಡಿ ಬೆರಳೆಣಿಕೆ ದಲಿತರಿಗೆ ಮಾತ್ರವೇ ಅನುಕೂಲ ಆಗಿದೆ. ಹಾಗಾಗಿ ಬಾಕಿ ಉಳಿದ ಡಿಸಿ ಮನ್ನಾ ಭೂಮಿಗೆ ಪ್ರತ್ಯೇಕ ನಿಯಮಾವಳಿ ರೂಪಿಸಿ ಅದನ್ನು ದಲಿತರಿಗೇ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಡಿಸಿ ಮನ್ನಾ ಭೂಮಿ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿಯೂ ಪ್ರತ್ಯೇಕ ಸಭೆ ನಡೆದಿದೆ. ಪ್ರತ್ಯೇಕ ನಿಯಮಾವಳಿಗೆ ಪ್ರಸ್ತಾವನೆಯೂ ಸಲ್ಲಿಕೆಯಾಗಿತ್ತು. ಸರ್ಕಾರದ ಕಾರ್ಯದರ್ಶಿಯವರು ಹಿಂದೆ ಕೊಟ್ಟಿರುವಂತೆ ಹಂಚಿಕೆಗೆ ಪತ್ರ ಬರೆದಿದ್ದಾರೆ. ಪಿಟಿಸಿಎಲ್ ಕಾಯ್ದೆಯಡಿ ಪ್ರತ್ಯೇಕವಾಗಿ ನಿಯಮಾವಳಿ ರೂಪಿಸುವ ಕುರಿತಂತೆ ಸಭೆಯಲ್ಲಿ ವ್ಯಕ್ತವಾದ ಆಗ್ರಹದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಜತೆಗೆ ಅರ್ಹ ಫಲಾನುಭವಿಗಳ ಪಟ್ಟಿ ಮಾಡಲು ತಹಶೀಲ್ದಾರರಿಗೆ ತಿಳಿಸಲಾಗುವುದು ಎಂದರು. ಡಿಸಿ ಮನ್ನಾ ಭೂಮಿ ಎಷ್ಟಿದೆ?: ದ.ಕ. ಜಿಲ್ಲೆಯಲ್ಲಿ ಒಟ್ಟು 8,509.728 ಎಕರೆ ಡಿಸಿ ಮನ್ನಾ ಭೂಮಿ ಗುರುತಿಸಲಾಗಿತ್ತು. ಅದರಲ್ಲಿ 5,698.774 ಎಕರೆ ಭೂಮಿಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ, 625.254 ಎಕರೆ ಇತರರಿಗೆ, 382.136 ಎಕರೆ ಡೀಮ್ಡ್ ಫಾರೆಸ್ಟ್‌ಗಾಗಿ, 195 ಎಕರೆ ಗೇರು ಅಭಿವೃದ್ಧಿಗಾಗಿ, 238.372 ಎಕರೆ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಹಾಗೂ 226.640 ಇತರ ಉದ್ದೇಶಕ್ಕೆ ಬಳಕೆಯಾಗಿದೆ. ಉಳಿಕೆಯ 1,143.553 ಎಕರೆ ಭೂಮಿಯಲ್ಲಿ 977.195 ಎಕರೆ ಅತಿಕ್ರಮಣವಾಗಿದ್ದು, ಇದೀಗ 166.358 ಎಕರೆ ಭೂಮಿ ಉಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.ಅಂಬೇಡ್ಕರ್ ಸರ್ಕಲ್ ವಿಳಂಬ: ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದು ಎರಡು ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ರವರಿಗೆ ಈ ರೀತಿಯ ಅವಮಾನವನ್ನು ಸಹಿಸಲಾಗದು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಜಿನ್ನಪ್ಪ ಬಂಗೇರ ಆಗ್ರಹಿಸಿದಾಗ ದಲಿತ ಮಖಂಡರು ದನಿಗೂಡಿಸಿದರು.ಈಗಾಗಲೇ ದಲಿತ ಸಂಘಟನೆಗಳಿಂದ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿ ನೀಡಲಾಗಿರುವ ನೀಲ ನಕಾಶೆ ಕುರಿತಂತೆ ಪ್ರಾಯೋಗಿಕವಾಗಿ ಇಟ್ಟಿಗೆ ಇರಿಸಿ ಪರಿಶೀಲಿಸಲಾಗಿದೆ. ಅದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಪಾಲಿಕೆ ಆಯುಕ್ತ ಆನಂದ್ ತಿಳಿಸಿದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಡಿಎಫ್‌ಒ ಆ್ಯಂಟನಿ ಮರಿಯಪ್ಪ, ಎಸ್ಪಿ ಯತೀಶ್ ಎನ್., ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿ ಹರ್ಷವರ್ಧನ್ ಇದ್ದರು.

ವೆನ್ಲಾಕ್‌ನಲ್ಲಿ ಕಾಲ್ ಸೆಂಟರ್ ಆರಂಭಕ್ಕೆ ಡಿಸಿ ಸೂಚನೆವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಚಿಕಿತ್ಸೆಗೆ ಕೆಲವೊಂದು ಔಷಧಿಗಳನ್ನು ಹೊರಗಿನಿಂದ ತರುವಂತೆ ಒತ್ತಡ ಹಾಕಲಾಗುತ್ತಿದೆ. ಕೆಲವೊಂದು ಪ್ರಕರಣಗಳನ್ನು ಹೊರಗಿನ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಸಂಜೆಯ ಬಳಿಕ ಸ್ಕಾೃನಿಂಗ್ ವ್ಯವಸ್ಥೆಯೂ ಇರುವುದಿಲ್ಲ ಎಂದು ದಲಿತ ಮುಖಂಡ ರಘು ಎಕ್ಕಾರು ಆರೋಪಿಸಿದರು.ಇಂತಹ ಯಾವುದೇ ರೀತಿಯ ಆರೋಪಗಳಿದ್ದಲ್ಲಿ ದೂರು ನೀಡಲು ಅನುಕೂಲವಾಗುವಂತೆ ಹಾಗೂ ಅದು ನೇರವಾಗಿ ಆಸ್ಪತ್ರೆಯ ಅಧೀಕ್ಷಕರು ಅಥವಾ ಜಿಲ್ಲಾಧಿಕಾರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಒಂದು ವಾರದೊಳಗೆ ಕಾಲ್ ಸೆಂಟರ್ ಆರಂಭಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ಸೇವೆಯಂತಹ ಪುಣ್ಯ ಕಾರ್ಯ ಮತ್ತೊಂದಿಲ್ಲ
ಸಾಧಕ-ಬಾಧಕ ಪರಿಗಣಿಸಿ ಸುದ್ದಿ ಪ್ರಕಟಿಸುವುದು ಒಳಿತು