ಕೊಟ್ಟೂರಿನಲ್ಲಿ ಬಿಇಒ ಕಚೇರಿ ತೆರೆಯುವ ಪ್ರಸ್ತಾಪ ನನೆಗುದಿಗೆ

KannadaprabhaNewsNetwork |  
Published : Jun 14, 2025, 01:28 AM IST
ಟೀಚರ್‌ | Kannada Prabha

ಸಾರಾಂಶ

ಕೊಟ್ಟೂರು ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಿಸುವ ಯೋಚನೆ ಪ್ರಸ್ತಾಪ ತಾಲೂಕು ರಚನೆಗೊಂಡು 8 ವರ್ಷಗಳ ನಂತರವೂ ಮತ್ತೆ ನನೆಗುದಿಗೆ ಬಿದ್ದಿದೆ. ನೂತನ ತಾಲೂಕುಗಳಲ್ಲಿ ಬಿಇಒ ಕಚೇರಿ ಆರಂಭಿಸಲು ಕೆಕೆಆರ್‌ಡಿಬಿ ಮಂಡಳಿಗೆ ಸಾಧ್ಯವಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಿ. ಸೋಮಶೇಖರ

ಕೊಟ್ಟೂರು: ಪ್ರಾಥಮಿಕ ಶಾಲಾ ವಾತಾವರಣಕ್ಕೆ ಉತ್ತಮ ಶೈಕ್ಷಣಿಕ ಅಡಿಪಾಯ ಹಾಕಲು ಮತ್ತು ಎಲ್ಲಾ ಬಗೆಯ ಬೋಧಕ - ಬೋಧಕೇತರ ಚಟುವಟಿಕೆ ಮೇಲೆ ನಿಗಾ ಇಡಲು ಕೊಟ್ಟೂರು ತಾಲೂಕಿಗೆ ಅವಶ್ಯವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಿಸುವ ಯೋಚನೆ ಪ್ರಸ್ತಾಪ ತಾಲೂಕು ರಚನೆಗೊಂಡು 8 ವರ್ಷಗಳ ನಂತರವೂ ಮತ್ತೆ ನನೆಗುದಿಗೆ ಬಿದ್ದಿದೆ.

ಸರ್ಕಾರ ತಾಲೂಕಿಗೊಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ತೆರೆಯುವ ಪ್ರಸ್ತಾಪವನ್ನು ಕೈಬಿಟ್ಟು ಹಳೆಯ ತಾಲೂಕಿನ ಶಿಕ್ಷಣಧಿಕಾರಿಯ ಕಚೇರಿಗೆ ಹೊಂದಾಣಿಕೆ ಮಾಡಿ ಕೈ ತೊಳೆದುಕೊಂಡಿತ್ತು.

ಆದರೆ ಕಲಬುರಗಿ ಹೆಚ್ಚುವರಿ ಆಯುಕ್ತ ಡಾ. ಆಕಾಶ ಶಂಕರ್ ತಮ್ಮ ವಿಭಾಗ ವ್ಯಾಪ್ತಿಯ ಶೈಕ್ಷಣಿಕ ಹಿನ್ನೆಲೆಯ ಮೂಲವನ್ನು ಹುಡುಕಿ ಹೊಸದಾಗಿ ತಾಲೂಕು ರಚಿಸಿರುವ ಕೊಟ್ಟೂರು ಸೇರಿದಂತೆ ಇತರ 15 ಸ್ಥಳಗಳಲ್ಲಿ ಬಿಇಒ ಕಚೇರಿಯನ್ನು ಸರ್ಕಾರಕ್ಕೆ ಹೊರೆಯಾಗಿದ ರೀತಿಯಲ್ಲಿ ಈ ವರ್ಷದ ಶೈಕ್ಷಣಿಕ ಆರಂಭದಲ್ಲಿ ತೆರೆಯುವ ಪ್ರಸ್ತಾಪವನ್ನು ರೂಪಿಸಿ ಸಂಬಂಧಪಟ್ಟ ಜಿಲ್ಲಾ ಡಿಡಿಪಿಐಗಳಿಂದ ಸಮಗ್ರ ಮಾಹಿತಿ ಪಡೆದು ವರದಿ ಸಿದ್ಧಗೊಳಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಲ್ಲಿಸಿದ್ದರು.

ನೂತನ ತಾಲೂಕುಗಳಲ್ಲಿ ಬಿಇಒ ಕಚೇರಿ ಆರಂಭಿಸಲು ಕೆಕೆಆರ್‌ಡಿಬಿ ಮಂಡಳಿಗೆ ಸಾಧ್ಯವಾಗದು ಎಂಬ ಅಂಶವನ್ನು ಹೆಚ್ಚುವರಿ ಶಿಕ್ಷಣ ಆಯುಕ್ತರಿಗೆ ತಿಳಿಸಿರುವುದರಿಂದ ಬಿಇಒ ಕಚೇರಿ ತೆರೆಯುವ ಉದ್ದೇಶಕ್ಕೆ ಮತ್ತೆ ಹಿನ್ನಡೆಯಾಗಿದೆ. ಕೊಟ್ಟೂರು ತಾಲೂಕಿನಲ್ಲಿ 21155 ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಕಲಿಯುತ್ತಿದ್ದು, 149 ಶಾಲೆಗಳು ಮಾತ್ರ ಇವೆ. ಈ ಪೈಕಿ 524 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಬಿಇಒ ಕಚೇರಿ ತೆರೆಯಲು ಅಗತ್ಯವಾಗಿ ಬೇಕಿರುವ ಕಟ್ಟಡ ಈಗಾಗಲೇ ಕೊಟ್ಟೂರಿನಲ್ಲಿ ಸಿದ್ಧಗೊಂಡು 5 ವರ್ಷದಿಂದ ಕಾಯುತ್ತಿದೆ. ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಬೇಕಾಗಿದ್ದು, ಈ ಬಗೆಯ ಪ್ರಸ್ತಾಪ ಮತ್ತು ಯೋಜನೆ ಜಾರಿಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮಕೈಗೊಳ್ಳಲಿ ಎಂಬುದು ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.

ಆದೇಶ ಬಂದಿಲ್ಲ: ಹೊಸ ಬಿಇಒ ಕಚೇರಿ ಸಂಬಂಧ ಕೊಟ್ಟೂರಿನಲ್ಲಿ ತೆರೆಯಲು ಅಗತ್ಯವಾಗಿ ಬೇಕಿರುವ ಸಿದ್ಧತೆಗಳನ್ನು ಈ ಹಿಂದೆ ಇದ್ದ ಬಿಇಒ ಕೈಗೊಂಡು ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ಇದು ಬಿಟ್ಟರೆ ಇದೀಗ ಕಚೇರಿ ತೆರೆಯುವ ಆದೇಶ ಹಿರಿಯ ಅಧಿಕಾರಿಗಳಿಂದ ಇದುವರೆಗೂ ಬಂದಿಲ್ಲ. ಹಾಲಿ ನಿರ್ದೇಶನದಂತೆ ಹಳೆಯ ತಾಲೂಕಾದ ಕೂಡ್ಲಿಗಿ ಕಚೇರಿಯಿಂದಲೇ ಹೆಚ್ಚುವರಿಯಾಗಿ ಕೊಟ್ಟೂರು ತಾಲೂಕಿನ ಶೈಕ್ಷಣಿಕ ಮತ್ತು ಆಡಳಿತವನ್ನು ನಿರ್ವಹಿಸುತ್ತಿದ್ದೇವೆ ಎಂದು ಪ್ರಭಾರಿ ಬಿಇಒ ಜಗದೀಶ್ ಹೇಳಿದ್ದಾರೆ.

ಕೊಟ್ಟೂರಿನಲ್ಲಿ ಬಿಇಒ ಕಚೇರಿ ತೆರೆಯದೆ ಇರುವುದು ಬೇಸರ ತರಿಸಿದೆ. ತಾಲೂಕು ಆಗಿದ್ದರೂ ಈ ಕಚೇರಿಯನ್ನು ತೆರೆಯಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಈ ಕುರಿತು ಜನಪ್ರತಿನಿಧಿಗಳು ಕೂಡಲೇ ಗಮನಿಸಿ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕಿದೆ ಎಂದು ಕೊಟ್ಟೂರು ನಾಗರಿಕ ಮರಳುಸಿದ್ದಪ್ಪ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ