ವಿದ್ಯುತ್ ಕಂಬದಿಂದ ಬಿದ್ದ ಗುತ್ತಿಗೆ ಕಾರ್ಮಿಕ: ಗಂಭೀರ ಗಾಯ

KannadaprabhaNewsNetwork |  
Published : Jun 14, 2025, 01:25 AM IST
ಕಂಬ | Kannada Prabha

ಸಾರಾಂಶ

ವಿದ್ಯುತ್‌ ಕಂಬವೇರಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಂಬ ಉರುಳಿ ಬಿದ್ದ ಪರಿಣಾಮ ಗುತ್ತಿಗೆ ಕಾರ್ಮಿಕ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಂಬ ಉರುಳಿ ಬಿದ್ದ ಪರಿಣಾಮ ಗುತ್ತಿಗೆ ಕಾರ್ಮಿಕ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಮಧ್ಯಾಹ್ನ ಸುಂಟಿಕೊಪ್ಪದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಐತನಳ್ಳಿ ಗ್ರಾಮದ ನಂದೀಶ(32) ಗಂಭೀರ ಗಾಯಗೊಂಡ ಯುವಕ.ಗುತ್ತಿಗೆ ಸಂಸ್ಥೆಯೊಂದು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು, ಗುತ್ತಿಗೆ ಕಾರ್ಮಿಕ ನಂದೀಶ್ ಶುಕ್ರವಾರ ಗಣೇಶ್ ಕ್ಯಾಂಟೀನ್ ಮುಂಭಾಗದ ಹೆದ್ದಾರಿ ಬದಿಯ ಚರಂಡಿ ಬದಿಯಲ್ಲಿ ನೆಡಲಾಗಿದ್ದ ಹೊಸ ಕಂಬವನ್ನು ಏರಿ ಇನ್ನೊಂದು ಕಂಬದಿಂದ ಅಳವಡಿಸುತ್ತಿದ್ದ ವಿದ್ಯುತ್ ವಯರ್ ಎಳೆಯುತ್ತಿದ್ದರು. ಈ ವೇಳೆ ಹೊಸ ಕಂಬ ನೆಲಕ್ಕುರುಳಿದೆ. ಅದರೊಂದಿಗೆ ನಂದೀಶ್ ಅವರು ಕಂಬದ ಕೆಳಗೆ ಬಿದ್ದಿದ್ದಾರೆ.

ಕಂಬಕ್ಕೆ ಅಳವಡಿಸಿದ್ದ ಉಕ್ಕಿನ ಸಲಾಕೆ ನಂದೀಶ್ ಅವರ ಸೊಂಟದ ಭಾಗಕ್ಕೆ ಆಳವಾಗಿ ಚುಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಗಾಯಾಳುವನ್ನು ಸುಂಟಿಕೊಪ್ಪ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಮಡಿಕೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ‌.ಇದೇ ವೇಳೆ ಈ ಕಂಬದ ಸಮೀಪದ ಮತ್ತೊಂದು ಕಂಬದಲ್ಲಿದ್ದ ಇನ್ನೊಬ್ಬ ಗುತ್ತಿಗೆ ಕಾರ್ಮಿಕ ಯೋಗೇಶ್ ಎಂಬವರು ಕೂಡ ಕೆಳಗೆ ಬಿದ್ದು ಕೈ ಮುರಿದುಕೊಂಡಿದ್ದಾರೆ.ಸಾರ್ವಜನಿಕರ ಆಕ್ರೋಶ: ಸುಂಟಿಕೊಪ್ಪ ಸೇರಿದಂತೆ ಈ ವ್ಯಾಪ್ತಿಯಲ್ಲಿ ಅಳವಡಿಸಿರುವ ಎಲ್ಲ ವಿದ್ಯುತ್ ಕಂಬಗಳು ಕೇವಲ 2 ಅಡಿಗಳ ಆಳದಲ್ಲಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ. ಕೋಟಿಗಟ್ಟಲೇ ಅನುದಾನದಲ್ಲಿ ಆಳವಡಿಸುತ್ತಿರುವ ಹೊಸ ವಿದ್ಯುತ್ ಕಂಬಗಳು ಈಗಾಗಲೇ ಆಳವಿಲ್ಲದೇ ವಾಲುತ್ತಿವೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.ಕೂಡಲೇ ಅವೈಜ್ಞಾನಿಕ ಮಾದರಿಯಲ್ಲಿ ಕಂಬಗಳನ್ನು ಅಳವಡಿಸಿದ ಗುತ್ತಿಗೆದಾರ ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ಅವರ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್, ಪೊಲೀಸರು, ಸೆಸ್ಕ್ ಕಿರಿಯ ಅಭಿಯಂತರ ಲವ ಭೇಟಿ ಪರಿಶೀಲನೆ ‌ನಡೆಸಿದ್ದಾರೆ.ಘಟನೆ ಸಂಬಂಧ ಕಾರ್ಮಿಕರನ್ನು ಕರೆತಂದ ಮೇಲ್ವಿಚಾರಕರ ಮೇಲೆ ನಿರ್ಲಕ್ಷ್ಯ ಆರೋಪದಡಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ