ಹೊಸದುರ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯುವ ರೆಡ್‌ಕ್ರಾಸ್ ಘಟಕಗಳ ಸಮರೋಪ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಬಡವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಸತಿ ಶಾಲಾ ಕಾಲೇಜುಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ನಮ್ಮ ಪ್ರಯತ್ನಕ್ಕೆ ಸರ್ಕಾರವು ಕೂಡ ಸ್ಪಂದಿಸುತ್ತಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯುವ ರೆಡ್‌ಕ್ರಾಸ್ ಘಟಕಗಳ ಸಮರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಶಾಸಕರಾದಗಿನಿಂದಲೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ನೀಡಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಮತ್ತೊಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ಮಾಣ ಕಾರ್ಯ ಮಸಣಿಹಳ್ಳಿ ಗೇಟ್ ಸಮೀಪ ನಡೆಯುತ್ತಿದೆ ಅದರಂತೆಯೇ, ಬಜಪ್ಪನಹಟ್ಟಿ ಬಳಿಯಿರುವ ಡಿಪ್ಲೊಮಾ ಕಾಲೇಜ್ ಪಕ್ಕದಲ್ಲಿ ಸರ್ಕಾರಿ ಉಪಕರಣಾಗಾರ ತರಬೇತಿ ಕೇಂದ್ರಕ್ಕೆ 6 ಎಕರೆ ಜಾಗ ಗುರುತಿಸಿದ್ದು, ಇನ್ನೊಂದು ವರ್ಷದಲ್ಲಿಯೇ ಪ್ರಾರಂಭ ಮಾಡಲಿದ್ದೇವೆ ಎಂದರು.
ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವಂತಹ ವ್ಯವಸ್ಥೆಯನ್ನು ಭಾರತ ಸರ್ಕಾರ ಮಾಡುತ್ತಿದೆ. ನಿಮ್ಮ ವಿದ್ಯಾಭ್ಯಾಸ ಪೂರ್ಣಗೊಂಡಾಗ ಯಾವುದೇ ಉದ್ಯೋಗ ಸಿಗಲಿಲ್ಲವೆಂದು ಬೇಸರಗೊಳ್ಳದೆ, ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಸೋಮಾರಿಗಳಾಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಬದುಕಿನ ಬದಲಾವಣೆಯ ನಿರ್ಧಾರವನ್ನು ತೆಗೆದುಕೊಳ್ಳುವ ವಯಸ್ಸು ನಿಮಗಿದೆ. ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಿ, ಸಾಮಾಜಿಕ ಜ್ಞಾನ ಬೆಳೆಸಿಕೊಳ್ಳಲು ಸಾರ್ವಜನಿಕವಾಗಿ ಬೆರೆಯಿರಿ.
ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವತ್ತ ಹೆಜ್ಜೆ ಹಾಕಿರಿ ಎಂದು ಸಲಹೆ ನೀಡಿದರು. ಶ್ರೀಮಂತರ ಮಕ್ಕಳು ಎಲ್ಲಿಗೆ ಬೇಕಾದರೂ ಹೋಗಿ ವಿದ್ಯಾಭ್ಯಾಸ ಮಾಡಬಹುದು. ಆದರೆ, ಬಡವರ ಮಕ್ಕಳು ಎಲ್ಲಿಗೆ ಹೋಗಲು ಆಗುವುದಿಲ್ಲ. ಹಾಗಾಗಿ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. 4 ತಿಂಗಳಲ್ಲಿ ದೇವರಾಜು ಅರಸು ಸಭಾ ಭವನವನ್ನು ಪೂರ್ಣಗೊಳಿಸಿ, ಉದ್ಘಾಟನೆ ಮಾಡಬೇಕೆಂಬ ನಿರ್ಣಯ ತೆಗೆದುಕೊಂಡಿದ್ದೇನೆ. ನಮ್ಮ ಬಹಳ ವರ್ಷಗಳ ಪ್ರಯತ್ನ ಸಫಲವಾಗುತ್ತಿದೆ ಎಂದರು.
ಇದೇ ವೇಳೆ ಕ್ರೀಡೆ, ರೆಡ್‌ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿವಿಧ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಜಿ.ಎಸ್.ಅಶ್ವತ್ ಯಾದವ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖಂಡ ಆಗ್ರೋ ಶಿವಣ್ಣ, ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ ಪ್ರಕಾಶ್, ಇಲ್ಕಲ್ ಅಜ್ಜಪ್ಪ, ಸೈಕ್ಲೆನ್ ಬಾಷಾ ಮತ್ತು ದೀಪಿಕಾ ಸತೀಶ್ ಸೇರಿದಂತೆ ಕಾಲೇಜು ಉಪನ್ಯಾಸಕರು, ಮುಖಂಡರು, ಸಿಬ್ಬಂದಿಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.