ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲಿನ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಗುರುಮಹಾಂತ ಶ್ರೀಗಳ ಹಾಗೂ ಸಂಘದ ಪದಾಧಿಕಾರಿಗಳಿಂದ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿ, ನಗರದ ನೇಕಾರರಿಗೆ ನೆರವಾಗಲು ಜವಳಿ ಪಾರ್ಕ್ ನಿರ್ಮಿಸುವ ಯೋಜನೆ ಇದೆ. ಇದರಿಂದ ಕೂಲಿಕಾರ್ಮಿಕರಿಗೆ ಐದು ಸಾವಿರ ಶಾಶ್ವತ ಉದ್ಯೋಗ ಸಿಗಲಿದೆ ಎಂದು ಎಂದು ಹೇಳಿದರು.ನಾನು ಸಚಿವನಾಗಲು ಎಸ್.ವಿ.ಎಂ. ಸಂಘ ಹಾಗೂ ಹುನಗುಂದ, ಇಳಕಲ್ಲ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಸಂಘ-ಸಂಸ್ಥೆಗಳು, ಎಲ್ಲ ಸಮುದಾಯದವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ಒತ್ತಡ ತಂದ ಪರಿಣಾಮ ನನ್ನನ್ನು ಸಚಿವ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಾರೆ. ನಾನು ಯುವಕನಾಗಿದ್ದಾಗ ಆಗಾಗ ಶ್ರೀಮಠಕ್ಕೆ ಹೋದಾಗ ನೀನು ನಿನ್ನ ತಂದೆಗಿಂತಲೂ ಎತ್ತರಕ್ಕೆ ಬೆಳೆಯುತ್ತೀಯ ಎಂದು ಡಾ.ಮಹಾಂತ ಶಿವಯೋಗಿಗಳು ಹೇಳುತ್ತಿದ್ದರು. ಆ ಮಾತು ಇಂದು ನಿಜವಾಗಿದೆ. ಶ್ರೀಗಳ ಆಶೀರ್ವಾದ ಸದಾ ನನ್ನ ಮೇಲಿದೆ. ನಿಷ್ಠೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತೇನೆ. ಎಸ್.ವಿ.ಎಂ. ಸಂಸ್ಥೆಯ ಬಗ್ಗೆ ಅಪಾರ ಗೌರವ ಇದ್ದು, ಸಂಸ್ಥೆ ಹೆಮ್ಮೆರವಾಗಿ ಬೆಳೆಯಲು ಸಹಾಯ, ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಡಾ.ಗುರುಮಹಾಂತ ಶ್ರೀಗಳು ಆಶೀರ್ವಚನ ನೀಡಿ, ಸಚಿವ ಕಾಶಪ್ಪನವರ ತಂದೆಯ ಹಾದಿಯಲ್ಲಿ ನಡೆಯುತ್ತಾ ಐತಿಹಾಸಿಕ ಕಾರ್ಯ ಮಾಡುತ್ತಿದ್ದಾರೆ. ಅವರಲ್ಲಿ ಧೈರ್ಯ ರಕ್ತಗತವಾಗಿ ಬೆಳೆದು ಬಂದಿದೆ. ಶಿಕ್ಷಣಕಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಎಸ್.ವಿ.ಎಂ ಸಂಸ್ಥೆಯ ಬೆನ್ನೆಲುಬಾಗಿ ಸಚಿವ ಕಾಶಪ್ಪನವರ ನಿಂತಿದ್ದಾರೆ ಎಂದರು.ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವತಿಯಿಂದ ಸಚಿವ ಕಾಶಪ್ಪನವಗೆ ಗೌರವ ಸತ್ಕಾರ ಮಾಡಿ ಕ್ರಿಯಾಶೀಲ ಚೈತನ್ಯ ರತ್ನ ಬಿರುದು ನೀಡಿ ಸನ್ಮಾನಿಸಲಾಯಿತು. ಎಸ್.ವಿ.ಎಂ.ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ. ಬಿರಾದಾರ ಅಭಿನಂದನ ಪತ್ರ ಸಲ್ಲಿಸಿದರು.