ಕುಮಟಾ: ತಾಲೂಕಿನಲ್ಲಿ ನೀರಿನ ಸಮಸ್ಯೆ ಶಾಶ್ವತ ಪರಿಹಾರದ ಉದ್ದೇಶದಿಂದ ಅಘನಾಶಿನಿ ನದಿಗೆ ಬ್ಯಾರೇಜ್ ಮಾದರಿಯ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.ಪಟ್ಟಣದ ತಾಲೂಕು ಸೌಧದ ಮೀಟಿಂಗ್ ಹಾಲ್ ಶನಿವಾರ ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಏರ್ಪಡಿಸಿದ್ದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.
ಸೇತುವೆ ನಿರ್ಮಾಣದಿಂದ ಈ ಭಾಗದಲ್ಲಿ ಉಪ್ಪು ನೀರು ಒಳನುಗ್ಗುವುದನ್ನು ತಡೆಯುವುದು, ಶಾಶ್ವತ ಕುಡಿಯುವ ನೀರು ಪೂರೈಕೆ, ರಸ್ತೆ ಸಂಚಾರ ಹಾಗೂ ಪ್ರವಾಹ ನಿರ್ವಹಣೆಗೂ ಅನುಕೂಲವಾಗಲಿದೆ ಎಂದರು.ಈಗಾಗಲೇ ಬಹುಗ್ರಾಮ ಯೋಜನೆಯಡಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆದಿದೆ. ಪೂರಕವಾಗಿ ಸಂತೆಗುಳಿ ಪಂಚಾಯಿತಿಯ ಕೈಲೋಡಿಯಲ್ಲಿ ಅಘನಾಶಿನಿ ನದಿಗೆ ಬ್ಯಾರೇಜು ಮಾದರಿಯ ಸೇತುವೆ ನಿರ್ಮಾಣಕ್ಕೆ ₹೧೨೫ ಕೋಟಿ ವೆಚ್ಚದ ಅಂದಾಜು ಪತ್ರಿಕೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಪಟ್ಟಣಕ್ಕೆ ಮಾತ್ರವಲ್ಲದೇ ಹಲವಾರು ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ನೀಡು ಕೊಡಬಹುದಾಗಿದೆ. ಹಾಗೆಯೇ ಬ್ಯಾರೇಜ್ ಸೇತುವೆಯ ಕಾರಣಕ್ಕೆ ಸ್ಥಳೀಯವಾಗಿ ಸಂಪರ್ಕ ಸೇತುವೆಯ ಅಗತ್ಯವೂ ಈಡೇರಲಿದೆ ಎಂದರು.
ಹಾಗೆಯೇ ಉಪ್ಪಿನಪಟ್ಟಣ ಬಳಿ ಚಂಡಿಕಾ ಹೊಳೆ ಸಂಗಮದ ಮೂಲಕ ಒಳ ಸೇರುವ ಉಪ್ಪು ನೀರು ತಡೆಯುವುದಕ್ಕೂ ಬ್ಯಾರೇಜ್ ಸೇತುವೆ ನಿರ್ಮಾಣಕ್ಕೆ ₹೧೦ ಕೋಟಿ ಕಾಮಗಾರಿ ನಿಗದಿಸಲಾಗಿದೆ. ಉಪ್ಪು ನೀರು ಒಳನುಗ್ಗದಂತೆ ತಡೆಗೋಡೆ ನಿರ್ಮಾಣದಿಂದ ಉತ್ತಮ ನೀರಿನ ಸಂಗ್ರಹಣೆಯ ಜತೆಗೆ ಮಳೆಗಾಲದ ಪ್ರವಾಹ ಕಾಲದ ಸಮಸ್ಯೆಗಳಿಗೂ ಉತ್ತರ ಸಿಗಲಿದೆ. ಈ ಎರಡು ಕಾಮಗಾರಿಗಳು ಅನುಷ್ಠಾನಗೊಂಡಾಗ ಇಡೀ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದ ಬೇಸಿಗೆಯ ಸಂದರ್ಭದಲ್ಲಿ ಉಂಟಾಗುವ ನೀರಿನ ಸಮಸ್ಯೆಯ ಬಗ್ಗೆ ಶಾಸಕರು ಚರ್ಚಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಅತ್ಯಧಿಕ ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಎದುರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದಾಗ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ತಾಲೂಕಿನ ಹೆಗಡೆ, ಹೊಲನಗದ್ದೆ, ಕಾಗಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಅಧಿಕವಿದೆ. ಕಳೆದ ವರ್ಷ ಟ್ಯಾಂಕರ್ ಮೂಲಕ ತುರ್ತು ನೀರು ಪೂರೈಸಲಾಗಿತ್ತು ಎಂದು ಪಿಡಿಒಗಳು ಸಭೆಯಲ್ಲಿ ವಿವರಿಸಿದರು.ಪ್ರತಿಕ್ರಿಯಿಸಿದ ಶಾಸಕ ಶೆಟ್ಟಿ, ತೀರಾ ಅಗತ್ಯವಿರುವ ಕಡೆಗಳಲ್ಲಿ ನೀರು ಪೂರೈಕೆಗೆ ತುರ್ತು ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ ಸೂಚನೆ ನೀಡಿದರು.
ಹಣ್ಣೆಮಠ, ತೆಪ್ಪ, ಮದ್ಗುಣಿ, ಹಳಕಾರ ಭಾಗದಲ್ಲಿಯೂ ಸಹ ನೀರಿನ ಸಮಸ್ಯೆ ಪ್ರಸ್ತಾಪವಾಯಿತು. ಹೊಲನಗದ್ದೆ ಪಂಚಾಯಿತಿ ಪಿಡಿಒ ಪರಿಶೀಲಿಸಿ ವ್ಯವಸ್ಥೆ ಕಲ್ಪಿಸಿ ಎಂದು ಸೂಚಿಸಲಾಯಿತು.ತಹಸೀಲ್ದಾರ ಶ್ರೀಕೃಷ್ಣ ಕಾಮಕರ್, ಉಪವಿಭಾಗಾಧಿಕಾರಿ ಕಾರ್ಯಾಲಯದ ತಹಸೀಲ್ದಾರ ಅಶೋಕ ಭಟ್, ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ತಾಪಂ ಇಒ ಆರ್.ಎಲ್. ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಜಿಪಂ ಎಇಇ ರಾಘವೇಂದ್ರ ನಾಯ್ಕ, ಎಲ್ಲ ಪಿಡಿಒ, ಕಾರ್ಯದರ್ಶಿಗಳು ಇದ್ದರು.