ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಒಂದೇ ಧರ್ಮ, ದೇವರ ಪ್ರತಿಪಾದನೆ: ಟಿ.ಡಿ.ರಾಜೇಗೌಡ
ಬಿ.ಎಚ್.ಕೈಮರ ನಾರಾಯಣಗುರು ಸಮುದಾಯ ಭವನದಲ್ಲಿ ವಿಚಾರ ಗೋಷ್ಠಿ, ಸನ್ಮಾನ -ಪ್ರತಿಭಾ ಪುರಸ್ಕಾರ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ 168 ವರ್ಷಗಳ ಹಿಂದೆಯೇ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಪ್ರತಿಪಾದಿಸಿದ್ದರು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಶನಿವಾರ ಬಿ.ಎಚ್.ಕೈಮರದ ನಾರಾಯಣಗುರು ಸಮುದಾಯ ಭವನದಲ್ಲಿ ತಾಲೂಕು ನಾರಾಯಣ ಗುರು ಸಮಾಜ ಸೇವಾ ಸಂಘದಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ಗೋಷ್ಠಿ, ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲರಿಗೂ ಸಹ ಬೋಜನ ನಡೆಸಿ ಸಮಾಜದ ಎಲ್ಲರನ್ನೂ ಒಂದು ಗೂಡಿಸುವ ಪ್ರಯತ್ನ ಮಾಡಿದ್ದರು. ಹಿಂದುಳಿದವರು ಸಂಘಟಿತರಾಗಿ, ಶಿಕ್ಷಣ ಪಡೆಯರಿ, ಉದ್ಯಮ ಪ್ರಾರಂಭಿಸಿ ಎಂದು ಕರೆ ನೀಡಿದ್ದರು. 1968 ರ ಸುಮಾರಿಗೆ ಭಾರತ ಸರ್ಕಾರ ಇಂತಹ ಮಹಾನ್ ವ್ಯಕ್ತಿ ಭಾವಯಿಂದ ಮಾಡಿದರೆ ಸಾವಿರಾರು ಜನರಿಗೆ ಉಪಯೋಗವಾಗಲಿದೆ ಎಂದಿದ್ದರು. ಮದ್ಯಪಾನ ನಿಷೇದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರು ಜಯಂತಿ ಪ್ರಾರಂಭಿಸಿದ್ದರು. ನಾನು ಹಿಂದಿನ ಅವಧಿಯಲ್ಲಿ ಎಲ್ಲಾ ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ ಅಂದಾಜು 1.25 ಕೋಟಿ ರು. ಅನುದಾನ ನೀಡಿದ್ದೆ. ಈ ನಾರಾಯಣ ಗುರು ಸಮುದಾಯ ಭವನಕ್ಕೂ ಅನುದಾನ ನೀಡಿದ್ದೇನೆ. ಮುಂದೆ ಶೃಂಗೇರಿ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತ ಎಲ್ಲಾ ಸಮುದಾಯ ಭವನಕ್ಕೆ ಅನುದಾನ ನೀಡಿ ಪೂರ್ಣ ಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಮಾತನಾಡಿ, ನಾರಾಯಣ ಗುರುಗಳು ಕೇರಳದಲ್ಲಿ 1854ರಲ್ಲಿ ಹುಟ್ಟಿದ್ದರು. ಇಂದು ಕೇರಳ ರಾಜ್ಯ ಸಾಕ್ಷರತೆಯಲ್ಲಿ ಶೇ 98 ರಷ್ಟು ಸಾಧನೆ ಮಾಡಿದ್ದರೆ ಅದಕ್ಕೆ ನಾರಾಯಣ ಗುರುಗಳ ಪ್ರಯತ್ನ ಇದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂಬುದೇ ಗುರುಗಳ ಆಶಯವಾಗಿತ್ತು. ಅವರು ಎಂದಿಗೂ ಕಾವಿ ಬಟ್ಟೆ ತೊಡಲಿಲ್ಲ. ಬಿಳಿ ಮುಂಡು ಪಂಚೆ ಧರಿಸುತ್ತಿದ್ದರು. ಹುಟ್ಟುವಾಗ ಯಾರೂ, ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಕೇಳಿರುವುದಿಲ್ಲ ಎಂದಿದ್ದರು. ತಾ. ಸೇವಾ ಸಂಘದ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಕಳೆದ 50 ವರ್ಷಗಳ ಹಿಂದೆಯೇ ತಾಲೂಕಿನಲ್ಲಿ ಪ್ರಾರಂಭವಾಗಿದ್ದ ಆರ್ಯ ಈಡಿಗ ಸಂಘ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. 10-12 ವರ್ಷಗಳ ಹಿಂದೆ ನಾರಾಯಣಗುರು ಸಮಾಜ ಸೇವಾ ಸಂಘ ಸ್ಥಾಪಿಸಿದ್ದೇವೆ. ಈ ಸಮಾಜದವರು ಒಗ್ಗಟ್ಟು ಪ್ರದರ್ಶಿಸಬೇಕು. ಈ ಭಾಗದಲ್ಲಿ 2 ಸಾವಿರ ಜನರಿದ್ದೇವೆ. ಕೈಮರದ ನಾರಾಯಗುರು ಸಮುದಾಯ ಭವನಕ್ಕೆ ಪ್ರತಿ ಯೊಬ್ಬರೂ ದಾನ ಮಾಡಿದ್ದಾರೆ. ವಿಶೇಷವಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್, ಸಿದ್ದರಾಮಯ್ಯ ಸರ್ಕಾರದಿಂದ 50 ಲಕ್ಷ ರು. ಹಾಗೂ ವಿಧಾನ ಪರಿಷತ್ ಅನುದಾನದಿಂದಲೂ ಹಣ ನೀಡಿದ್ದಾರೆ. ಶಾಸಕ ರಾಜೇಗೌಡರು 12 ಲಕ್ಷ, ಬಿ.ಕೆ. ಹರಿಪ್ರಸಾದ್ 35 ಲಕ್ಷ ಕೊಟ್ಟಿದ್ದಾರೆ. ಇನ್ನಷ್ಟು ಕೆಲಸಗಳು ಬಾಕಿ ಇದ್ದು ಶೀಘ್ರದಲ್ಲೇ ಉದ್ಘಾಟನೆ ಮಾಡಲಿದ್ದೇವೆ ಎಂದರು. ಶಾಸಕ ಟಿ.ಡಿ.ರಾಜೇಗೌಡ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್ ಅವರನ್ನು ಮಂಗಳ ವಾದ್ಯ ಹಾಗೂ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ , ವಿಧಾನ ಪರಿಷತ್ ಮಾಜಿಸದಸ್ಯ ಎಂ.ಶ್ರೀನಿವಾಸ್ ಅವರನ್ನು ಸಮಾಜ ಸೇವಾ ಸಂಘದಿಂದ ಸನ್ಮಾನಿಸಲಾಯಿತು. ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ 60 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಸನ್ಮಾನ ಮಾಡಲಾಯಿತು. ಮುಖಂಡರಾದ ಬಾಳೆಹೊನ್ನೂರು ಸತೀಶ್, ಶಂಕರ್ ಸುತ್ತಾ, ಸಿ.ಎನ್.ದೇವರಾಜ್, ನಾರಾಯಣಪೂಜಾರಿ, ಎಂ.ವಿ.ಮೂರ್ತಿ, ಜನಾರ್ಧನ್, ಚಂದ್ರಶೇಖರ್, ಎಚ್.ಎಚ್, ಪ್ರೇಮ ವಾಸುದೇವಕೋಟ್ಯಾನ್, ಎಂ.ವಿ.ರಮೇಶ್, ಜಿ.ಕೆ.ಜಯರಾಂ, ಮಾದವಿ ರಾಮಚಂದ್ರ, ಜಾನಕಿ ರಾಜಶೇಖರ್, ಹೊನಗಾರು ರಮೇಶ್, ಎಚ್.ಎಲ್.ಯೋಗೀಶ್, ನಾಗರಾಜ್ ಗಾಂಧಿ ಗ್ರಾಮ, ಹಾತೂರು ಪ್ರಭಾಕರ್ ,ವಾಸು ಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಹಾತೂರು ಪ್ರಭಾಕರ್, ಕೆ.ಎಸ್.ನಾಗೇಶ್ ಇದ್ದರು. ---ಬಾಕ್ಸ್ --- ಜಾತಿಬಗ್ಗ್ಎ ಕೀಳರಿಮೆ ಬೇಡ: ಡಾ.ಅಣ್ಣಪ್ಪ ನಾರಾಯಣಗುರು ಸಮಾಜದಲ್ಲಿ 26 ಉಪ ಪಂಗಡಗಳಿದ್ದು ಯಾರೂ ಕೂಡಾ ತಮ್ಮ ಜಾತಿಯ ಬಗ್ಗೆ ಕೀಳರಿಮ, ಮಡಿವಂತಿಕೆ, ಬಡವ , ಶ್ರೀಮಂತ ಬೇಧ, ಭಾವ ಮಾಡಬಾರದು ಎಂದು ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅಣ್ಣಪ್ಪ ಎನ್.ಮಳೀಮಠ್ ತಿಳಿಸಿದರು. ಉಪನ್ಯಾಸ ನೀಡಿ, ನಾರಾಯಣ ಗುರುಗಳ ತತ್ವವನ್ನು ಪ್ರತಿಯೊಬ್ಬರೂ ಶೇ 10 ರಷ್ಟನ್ನಾದರೂ ಅಳಡಿಸಿಕೊಳ್ಳಿ. ಹಿಂದುಳಿದ ವರ್ಗದವರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣವನ್ನೇ ಆಸ್ತಿಯನ್ನಾಗಿ ಮಾಡಬೇಕು. ನಾರಾಯಣ ಗುರುಗಳಿಗೆ ಮಗುವಿನ ಮುಗ್ಧತೆ , ತಾಯಿಯ ಕರುಣೆ ಇತ್ತು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.