ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೆಳಗ್ಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಘೋಷಣೆಗಳ ಸಹಿತವಾಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸುವ ಮೂಲಕ ಮುಖ್ಯ ಮಂತ್ರಿಗಳ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಶನ್‌ಗೆ ಅವಕಾಶ ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಕೆಲ ಕಾಲ ಧರಣಿ ಮುಷ್ಕರ ನಡೆದ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಸದಸ್ಯರಾದ ಟಿ.ಪಿ.ರಮೇಶ್ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ, ದೀನ ದಲಿತರು, ದುರ್ಬಲ ವರ್ಗದ ಆಶಾಕಿರಣವಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸುವ ಷಡ್ಯಂತ್ರ ನಡೆಯುತ್ತಿರುವುದಾಗಿ ಆರೋಪಿಸಿದರು.ಕೇಂದ್ರ ಸರ್ಕಾರದ ಬಹಳಷ್ಟು ಹಗರಣಗಳನ್ನು ತೆರೆದಿಟ್ಟು ಪ್ರಧಾನಿ ಮೋದಿ ಅವರನ್ನು ಅಲುಗಾಡಿಸಿರುವ ನಾಯಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸುವ ಪ್ರಯತ್ನವಾಗಿ ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡು, ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕಿತ್ತೊಗೆಯುವ ಹುನ್ನಾರ ನಡೆಸಿರುವುದಾಗಿ ತೀಕ್ಮ್ಣವಾಗಿ ನುಡಿದು, ಜನಪರವಾದ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಜೀವತುಂಬುವ ಕೆಲಸವನ್ನು ನಾವಿಂದು ಮಾಡುತ್ತಿರುವುದಾಗಿ ತಿಳಿಸಿದರು.
ಮನವಿ ಸಲ್ಲಿಕೆ- ಕೊಡಗು ಜಿಲ್ಲಾ ಕಾಂಗ್ರೆಸ್ ಪರವಾಗಿ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಪ್ರಮುಖ ಏಳು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಮುಖ್ಯ ಮಂತ್ರಿಗಳ ವಿರುದ್ಧ ರಾಜ್ಯಪಾಲರು ನೀಡಿರುವ ಆದೇಶ ಜನರಿಂದ ಆಯ್ಕೆಯಾದ ಸರ್ಕಾರದ ವಿರುದ್ಧದ ದಾಳಿ ಮಾತ್ರವಲ್ಲ, ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರದ ಭಾಗವಾಗಿದೆ ಎಂದೂ ಮನವಿಯಲ್ಲಿ ಆರೋಪಿಸಲಾಗಿದ್ದು, ರಾಜ್ಯಪಾಲರು ಮುಖ್ಯ ಮಂತ್ರಿಗಳ ವಿರುದ್ಧ ನೀಡಿರುವ ಆದೇಶ ಕೇಂದ್ರ ಸರ್ಕಾರದ ಪ್ರಭಾವದಿಂದ ನಡೆದದ್ದು ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆಯೆಂದು ಟೀಕಿಸಲಾಗಿದೆ.