ಬಿಜೆಪಿ-ಜೆಡಿಎಸ್‌ ರಾಜಕೀಯ ಕುತಂತ್ರದ ಭಾಗ ಪ್ರಾಸಿಕ್ಯೂಶನ್‌

KannadaprabhaNewsNetwork | Published : Sep 25, 2024 12:46 AM

ಸಾರಾಂಶ

ಬಹುಮತದಿಂದ ಬಂದ ಸರ್ಕಾರ ನಮ್ಮದು. ಅಧಿಕಾರಕ್ಕೆ ಬಂದ ತಕ್ಷಣ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುತ್ತಿದ್ದಾರೆ.

ಧಾರವಾಡ:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಂಬಂಧಿಸಿದ ಮೂಲ ತನಿಖೆಯೇ ಆಗಿಲ್ಲ. ತನಿಖೆ ಮಾಡಲು ಅಡ್ಡಿ ಇಲ್ಲ ಎಂದು ಕೋರ್ಟ್ ಹೇಳಿರಬಹುದು. ತನಿಖೆ ಆಗದೇ ಪ್ರಾಸಿಕ್ಯೂಷನ್ ಪ್ರಶ್ನೆ ಎಲ್ಲಿಂದು ಬಂತು? ನಾವೆಲ್ಲ ಮುಖ್ಯಮಂತ್ರಿಗಳ ಜತೆಗಿದ್ದೇವೆ. ಪ್ರಾಸಿಕ್ಯೂಷನ್‌ ಒಂದು ಷಡ್ಯಂತ್ರವಾಗಿದ್ದು, ಬಿಜೆಪಿ-ಜೆಡಿಎಸ್‌ನ ರಾಜಕೀಯ ಕುತಂತ್ರದ ಒಂದು ಭಾಗ ಎಂದು ಸಚಿವ ಡಾ. ಎಂ.ಸಿ. ಸುಧಾಕರ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಕಾನೂನು ಹೋರಾಟಕ್ಕೆ ಸಾಕಷ್ಟು ಅವಕಾಶಗಳಿವೆ. ಇದನ್ನು ನಾವು ಕಾನೂನು ರೀತಿ ನೋಡಿಕೊಳ್ಳುತ್ತೇವೆ. ಸಿದ್ದರಾಮಯ್ಯನವರು ತಪ್ಪು ಮಾಡಿದ್ದಾರೆ ಎನ್ನಲು ಸಾಧ್ಯವಿಲ್ಲ. ಮೊದಲು ತನಿಖೆಯಾಗಲಿ, ತನಿಖೆಯಲ್ಲಿ ತಪ್ಪು ಮಾಡಿದಾಗ ಮಾತ್ರ ಆರೋಪಿಯಾಗುತ್ತಾರೆ. ಇದರ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳುವೆ. ಸರ್ಕಾರಕ್ಕೆ ಮುಜುಗರ ತರಬೇಕು ಎಂತಲೇ ವಿರೋಧ ಪಕ್ಷದವರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಬಹುಮತದಿಂದ ಬಂದ ಸರ್ಕಾರ ನಮ್ಮದು. ಅಧಿಕಾರಕ್ಕೆ ಬಂದ ತಕ್ಷಣ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡ ಮೇಲೆ ಸರ್ಕಾರ ಬೀಳಿಸುವುದು ಜೋರಾಗಿ ನಡೆದಿದ್ದು, ಕುಮಾರಸ್ವಾಮಿ ಇದಕ್ಕಾಗಿ ನಿದ್ದೆ ಮಾಡುತ್ತಿಲ್ಲ. ಕೇಂದ್ರದಲ್ಲಿ ಅವರು ಮಂತ್ರಿಯಾದರೂ ರಾಜ್ಯದಲ್ಲಿ ಅಧಿಕಾರ ಚಲಾಯಿಸುವ ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾಗುವುದಿಲ್ಲ. ಇಡೀ ದೇಶದಲ್ಲಿ ಕುತಂತ್ರದ ರಾಜಕಾರಣ ನಡೆಯುತ್ತಿದೆ. ಇದರಿಂದ ನಾವು ಧೃತಿಗೆಡುವುದಿಲ್ಲ ಎಂದರು.ಸಮಿತಿ ಶಿಫಾರಸಿನಂತೆ ಕುಲಪತಿ ನೇಮಕ

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸ್ತುತ ಕುಲಪತಿಗಳು ನಿವೃತ್ತಿಯ ನಂತರ ಸಮಿತಿಯ ಶಿಫಾರಸಿನ ಮೇಲೆ ನೂತನ ಕುಲಪತಿಗಳ ಆಯ್ಕೆ ಬಗ್ಗೆ ಚಿಂತನೆ ನಡೆಸಲಾಗುವುದು. ವಿಶ್ವವಿದ್ಯಾಲಯಗಳಿಗೆ ಸೂಕ್ತ ಅನುದಾನ ನೀಡುವ ಮೂಲಕ ನೂತನ ಕುಲಪತಿಗಳ ನೇಮಕದ ನಿರ್ಧಾರವನ್ನು ಮಾಡಲಾಗುವುದು. ಅದಕ್ಕಾಗಿ ಅಧಿಸೂಚನೆ ಹೊರಡಿಸಿ, ಸಮಿತಿ ರಚಿಸಿ, ಯಾವುದೇ ಜಾತಿ, ಧರ್ಮ ಎನ್ನದೇ ಸಮಿತಿ ಶಿಫಾರಸು ಮಾಡಿದ ಅರ್ಹ ವ್ಯಕ್ತಿಯನ್ನು ಕುಲಪತಿಯನ್ನಾಗಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ತಿಳಿಸಿದರು.

Share this article