- ಹರಿಹರ ನಗರಸಭೆ ಎದುರು ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆ ಆಗ್ರಹ । 30 ವರ್ಷದಿಂದ ಸಮಸ್ಯೆ ಪರಿಹರಿಸಿಲ್ಲ: ಆರೋಪ - - - ಕನ್ನಡಪ್ರಭ ವಾರ್ತೆ ಹರಿಹರ
ಸಂಘಟನೆ ಹರಿಹರ ತಾಲೂಕು ಘಟಕ ಅಧ್ಯಕ್ಷ ಎಸ್. ಗೋವಿಂದ ಮಾತನಾಡಿ, ಎಪಿಎಂಸಿ ಹಿಂಭಾಗದ ರಸ್ತೆ ಬದಿಯಲ್ಲಿ ಕಳೆದ ೩೦ ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಕಡುಬಡವರು ಸಣ್ಣ, ಪುಟ್ಟ ಗುಡಿಸಲುಗಳಲ್ಲಿ ಬದುಕು ನಡೆಸುತ್ತಿದ್ದಾರೆ. ಆದರೆ, ಮಳೆಗಾಲದಲ್ಲಿ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ದಶಕದಿಂದ ಇಲ್ಲಿನ ನಿವಾಸಿಗಳು ಶಾಸಕರು, ಸಚಿವರು, ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕಾಗಿ ಮನವಿ ನೀಡುತ್ತಾ ಬಂದಿದ್ದಾರೆ. ಆದರೆ ಇದುವರೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜನಪ್ರತಿನಿಧಿಗಳು-ಅಧಿಕಾರಿಗಳು ಮೌನ:೧೫೦ಕ್ಕೂ ಹೆಚ್ಚು ಕುಟುಂಬಗಳಿರುವ ಈ ಭಾಗದ ನಿವಾಸಿಗಳು ಪ್ರತಿ ಮಳೆಗಾಲದಲ್ಲಿ ಒಂದೆರಡು ತಿಂಗಳು ಎಪಿಎಂಸಿ ಆವರಣದ ಕಾಳಜಿ ಕೇಂದ್ರದ ಪಾಲಾಗುವುದು ತಪ್ಪಿಲ್ಲ. ಬಯಲು ಪ್ರದೇಶ ಆಗಿರುವುದರಿಂದ ವಿಷಜಂತುಗಳ ಕಾಟವೂ ಅಧಿಕವಾಗಿದೆ. ಹಲವು ವರ್ಷಗಳಿಂದ ಸ್ಥಳಕ್ಕೆ ಶಾಸಕರು, ತಹಸೀಲ್ದಾರ್, ಉಸ್ತುವಾರಿ ಜಿಲ್ಲಾ ಕಾರ್ಯದರ್ಶಿ ಜಿಲ್ಲಾಧಿಕಾರಿ, ಸೇರಿದಂತೆ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ, ಪ್ರತಿ ಬಾರಿಯೂ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆಗಳನ್ನು ನೀಡಿದ್ದರು. ಆದರೆ ಮಳೆ ಬಂದಾಗ ಸಾಂತ್ವನ ಹೇಳಿ ಹೋದವರು ಮತ್ತೆ ಈ ಕಡೆ ತಲೆ ಹಾಕಿಯೂ ಮಲಗುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಮಾತನಾಡಿ, ಈಗಾಗಲೆ ಸ್ಥಳೀಯ ಶಾಸಕರು ಈಚೆಗೆ ವಿಧಾನಸಭೆಯಲ್ಲಿ ವಸತಿ ಯೋಜನೆಗೆ ಜಮೀನು ಖರೀದಿಸಲು ಅನುದಾನಕ್ಕಾಗಿ ಮಾತನಾಡಿದ್ದಾರೆ. ಅನುದಾನ ದೊರಕಿದಲ್ಲಿ ಗಂಗಾನಗರದ ನಿವಾಸಿಗಳಿಗೂ ಆಧ್ಯತೆ ನೀಡಲಾಗುವುದೆಂದು ಭರವಸೆ ನೀಡಿದರು.
ಆಗ ಎಸ್.ಗೋವಿಂದ ಅವರು, ಸರ್ಕಾರದಿಂದ ಅನುದಾನ ಬರುವವರೆಗೆ ತಾತ್ಕಾಲಿಕವಾಗಿ ನಿವಾಸಿಗಳಿಗೆ ನಗರಸಭೆಯ ಬೇರೆ ಜಾಗದಲ್ಲಿ ವಾಸಿಸಲು ಅವಕಾಶ ಕಲ್ಪಿಸಬೇಕು. ತಪ್ಪಿದಲ್ಲಿ ಸಂಘಟನೆಯಿಂದಲೇ ಇವರನ್ನು ನಗರಸಭೆ ಜಾಗಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಆನಂದ ಕುಮಾರ್, ಸುನೀಲ್ ಕುಮಾರ್ ಸಿ.ಎಚ್. ಶ್ರೀನಿವಾಸ್, ಶಬರೀಶ್, ರಾಜು ಗಾಂಧಿನಗರ, ಭರತ್ ಭಾನುವಳ್ಳಿ, ಗಂಗಾನಗರದ ನಿವಾಸಿಗಳಾದ ಸೈಯದ್ ಅಶ್ರಫ್ ಅಲಿ, ಹುಸೇನಿ, ದಾದಾಪೀರ್, ಸದ್ದಾಂ, ಪೀರ್ ಸಾಬ್, ರಮೀಜಾ, ರಿಜ್ವಾನ್, ಫಾತಿಮಾ, ಮುಮ್ತಾಜ್ ಹಾಗೂ ಇತರರಿದ್ದರು.- - - -೩೦ಎಚ್‌ಆರ್‌ಆರ್‌೨:
ಹರಿಹರದ ಗಂಗಾನಗರದ ನಿವಾಸಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.