ಸಂಡೂರು: ತಾಲೂಕಿನ ತಾಳೂರು ಗ್ರಾಪಂ ವ್ಯಾಪ್ತಿಯ ಜೋಗ ಗ್ರಾಮಸ್ಥರಿಗೆ ಕರಡಿ ಹಾವಳಿಯಿಂದ ರಕ್ಷಣೆ ಒದಗಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಮಂಗಳವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಹಿಂದೆಯೂ ಕರಡಿಯೊಂದು ಗ್ರಾಮದ ಮುಷ್ಠೀರಪ್ಪ ಎಂಬ ವ್ಯಕ್ತಿಯ ಮೇಲೆ ದಾಳಿ ಮಾಡಿ, ಗಾಯಗೊಳಿಸಿತ್ತು. ಇದಕ್ಕೆ ಇನ್ನೂ ಪರಿಹಾರ ದೊರಕಿಲ್ಲ. ಇದೀಗ ಕರಡಿಗಳ ಹಾವಳಿ ಪುನಃ ಆರಂಭವಾಗಿರುವುದರಿಂದ, ಗ್ರಾಮದ ಜನತೆ ಭಯಭೀತರಾಗಿದ್ದಾರೆ. ಮುಂಗಾರು ಮಳೆ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗೂ ಅಡಚಣೆ ಉಂಟಾಗಿದೆ. ರಾತ್ರಿ ಹೊತ್ತಿನಲ್ಲಿ ದೇಹ ಬಾಧೆ ಪರಿಹರಿಸಿಕೊಳ್ಳಲು ಹೊರಬಾರದಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ, ಅರಣ್ಯ ಇಲಾಖೆಯವರು ಕೂಡಲೆ ಕ್ರಮಕೈಗೊಂಡು ಕರಡಿಗಳನ್ನು ಸೆರೆ ಹಿಡಿದು ಗ್ರಾಮಸ್ಥರಲ್ಲಿ ಮನೆಮಾಡಿರುವ ಭಯ ಹೋಗಲಾಡಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಎಂ. ಖಲಂದರ್ ಬಾಷಾ, ಮುಖಂಡರಾದ ಜೆ.ಎಂ. ಚನ್ನಬಸಯ್ಯ, ವಿ. ದೇವಣ್ಣ, ದುರ್ಗಮ್ಮ ಮುಂತಾದವರು ಉಪಸ್ಥಿತರಿದ್ದರು.