- ಅತಿಕ್ರಮಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಕ್ರೀಡಾಪಟುಗಳ ಮನವಿ
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಡಿಆರ್‌ಎಂ ಸರ್ಕಾರಿ ಪ್ರೌಢಶಾಲೆ ಆಟದ ಮೈದಾನವನ್ನು ಅತಿಕ್ರಮಣದಿಂದ ರಕ್ಷಿಸಬೇಕು ಎಂದು ಆಗ್ರಹಿಸಿ ಕ್ರೀಡಾಪಟುಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಬುಧವಾರ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಖಾಸಗಿ ವಿದ್ಯಾ ಸಂಸ್ಥೆಯೊಂದು ಮೈದಾನದ ಭಾಗದಲ್ಲಿ ರಸ್ತೆ ಹಾಗೂ ಕಾಂಪೌಂಡ್ ನಿರ್ಮಾಣ ಕಾರ್ಯ ಕೈಗೊಂಡಿದೆ. ಈ ಹಿನ್ನೆಲೆ ಬುಧವಾರ ಬೆಳಗ್ಗೆ ಮೈದಾನಕ್ಕೆ ತೆರಳಿದಾಗ ಸ್ಥಳದಲ್ಲಿ ಅತಿಕ್ರಮಣ ನಡೆದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ತಕ್ಷಣ ತಹಸೀಲ್ದಾರ್ ಅವರನ್ನು ಕರೆಸಿ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಇದು ಒಂದೇ ದೊಡ್ಡ ಆಟದ ಮೈದಾನವಾಗಿದೆ. ಬೆಳಗಿನ ವಾಯು ವಿಹಾರ, ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗಳು ಹಾಗೂ ಸಾರ್ವಜನಿಕರ ಆರೋಗ್ಯಕ್ಕಾಗಿ ಅತ್ಯಂತ ಅಗತ್ಯವಾಗಿದೆ. ಆದರೆ ವರ್ಷದಿಂದ ವರ್ಷಕ್ಕೆ ಮೈದಾನದ ವಿಸ್ತೀರ್ಣ ಕಡಿಮೆಯಾಗುತ್ತಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದರು.ವಿದ್ಯಾಸಂಸ್ಥೆಗಳನ್ನು ಕಟ್ಟಡಗಳಲ್ಲಿ ನಡೆಸಬಹುದು. ಆದರೆ ಆಟದ ಮೈದಾನವನ್ನು ಕಟ್ಟಡಗಳಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಮೈದಾನದ ಗಡಿಯನ್ನು ಅಳತೆ ಮಾಡಿ ಹದ್ದುಬಸ್ತು ಮಾಡಬೇಕು. ಅತಿಕ್ರಮಣ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಶಾಲಾ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ನಗರದ ನಾಗರಿಕರ ಹಿತದೃಷ್ಟಿಯಿಂದ ಈ ಆಟದ ಮೈದಾನವನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹರಿಹರ ವಕೀಲರ ಸಂಘದ ಅಧ್ಯಕ್ಷ ಬಿ. ಆನಂದ್ ಕುಮಾರ್, ಅಜಿತ್ ಸಾವಂತ್, ರಾಘವೇಂದ್ರ ಉಪಾಧ್ಯ, ನಿರಂಜನ್, ಶಾಂತರಾಜ್, ಗೋಪಾಲಕೃಷ್ಣ, ಅಬ್ದುಲ್ ಗಣಿ, ರವಿ, ಶ್ರೀಧರ್, ಕೆ. ಕೊತ್ರಪ್ಪ, ರಾಜನಹಳ್ಳಿ ಮಂಜುನಾಥ್, ರಮೇಶ್ ಎಂ., ಸಂತೋಷ್ ಎಂ. ಇತರರು ಪಾಲ್ಗೊಂಡಿದ್ದರು.- - -
-21HRR.02:ಹರಿಹರದ ಡಿಆರ್‌ಎಂ ಸರ್ಕಾರಿ ಪ್ರೌಢಶಾಲೆ ಆಟದ ಮೈದಾನವನ್ನು ಅತಿಕ್ರಮಣದಿಂದ ರಕ್ಷಿಸಲು ಆಗ್ರಹಿಸಿ ಕ್ರೀಡಾಪಟುಗಳು ಹಾಗೂ ಹಳೆಯ ವಿದ್ಯಾರ್ಥಿಗಳು ತಹಸೀಲ್ದಾರ್‌ಗೆ ಬುಧವಾರ ಮನವಿ ಸಲ್ಲಿಸಿದರು.