ಸಿಹಿ ಪದಾರ್ಥ, ಅಕ್ಕಿ ಹಾಗೂ ಇತರೆ ಪದಾರ್ಥ ಸೇರಿಯೇ ಬರೋಬ್ಬರಿ 3817 ಕ್ವಿಂಟಲ್ ಆಹಾರ ಪದಾರ್ಥ ಬಳಕೆಯಾಗಿದೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಈ ಬಾರಿಯ ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ ನಿರೀಕ್ಷೆ ಮೀರಿ ಭಕ್ತರು, ಸಾರ್ವಜನಿಕರು ಆಗಮಿಸಿದ್ದು, ಎಲ್ಲವೂ ದಾಖಲೆಯ ಪ್ರಮಾಣದಲ್ಲಿಯೇ ದಾಖಲಾಗಿದೆ. 55 ಕ್ವಿಂಟಲ್ ಉಪ್ಪು ಬಳಕೆಯಾಗಿದ್ದರೆ 9 ಕ್ವಿಂಟಲ್ ಅರಿಶಿಣಪುಡಿ. 100 ಕ್ವಿಂಟಲ್ ಒಳ್ಳೆಣ್ಣೆ ಬಳಕೆಯಾಗಿದೆ. 1350 ಕ್ವಿಂಟಲ್ ಅಕ್ಕಿ, 1034 ಕ್ವಿಂಟಲ್ ಸಿಹಿಪದಾರ್ಥ ಬಳಕೆಯಾಗಿದೆ ಎಂದು ಲೆಕ್ಕ ಹಾಕಲಾಗಿದೆ.
ಜ.1ರಿಂದ ಪ್ರಾರಂಭವಾದ ಮಹಾದಾಸೋಹ ಜ.18ರ ವರೆಗೂ ಸಾಂಗವಾಗಿ ನಡೆದಿದೆ. ಮೊದಲ ಐದು ದಿನ ಮಾತ್ರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದರೆ ರಥೋತ್ಸವ ಬಳಿಕ ಲಕ್ಷೋಪ ಲಕ್ಷ ಭಕ್ತರು ನಿತ್ಯವೂ ಪ್ರಸಾದ ಸ್ವೀಕರಿಸಿದ್ದಾರೆ.
ಸಿಹಿ ಪದಾರ್ಥ, ಅಕ್ಕಿ ಹಾಗೂ ಇತರೆ ಪದಾರ್ಥ ಸೇರಿಯೇ ಬರೋಬ್ಬರಿ 3817 ಕ್ವಿಂಟಲ್ ಆಹಾರ ಪದಾರ್ಥ ಬಳಕೆಯಾಗಿದೆ. ಇಷ್ಟೆಲ್ಲ ಸಿದ್ಧ ಮಾಡಲು ಬರೋಬ್ಬರಿ 600 ಕ್ವಿಂಟಲ್ ಕಟ್ಟಿಗೆ ಬಳಕೆಯಾಗಿದೆ. ಇನ್ನು 6 ಲಕ್ಷ ಮಿರ್ಚಿ ಮತ್ತು 20 ಲಕ್ಷ ರೊಟ್ಟಿ ಹಾಗೂ 12-15 ಲಕ್ಷ ಮೈಸೂರು ಪಾಕನ್ನು ಮಹಾ ಪ್ರಸಾದದಲ್ಲಿ ನೀಡಿದ್ದು ಪ್ರತ್ಯೇಕ.
ಹೀಗೆ, ಲೆಕ್ಕ ಹಾಕುತ್ತ ಹೋದರೆ ಈ ಬಾರಿಯ ಮಹಾದಾಸೋಹದಲ್ಲಿ ಎಲ್ಲವೂ ದಾಖಲೆಯಷ್ಟು ಬಳಕೆಯಾಗಿದೆ. ಇದೆಲ್ಲವೂ ಬಹುತೇಕ ಭಕ್ತರು ಕೊಟ್ಟಿದ್ದೇ. ಸಿಹಿಪದಾರ್ಥ ಮತ್ತು ರೊಟ್ಟಿಯನ್ನು ಭಕ್ತರೇ ಸಿದ್ಧ ಮಾಡಿಕೊಂಡು ಬಂದು ಕೊಟ್ಟಿದ್ದಾರೆ. ಉಳಿದಂತೆಯೂ ಬಹುತೇಕ ಭಕ್ತರೇ ತಂದು ಕೊಟ್ಟಿದ್ದು, ಬರೋಬ್ಬರಿ 18-20 ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಲೆಕ್ಕಾಚಾರ: ಗವಿಸಿದ್ಧೇಶ್ವರ ಮಹಾಹಾದೋಸಹಕ್ಕೆ ಭಕ್ತರು ತಂದುಕೊಟ್ಟಿದ್ದೆಲ್ಲವನ್ನು ದಾಖಲೆ ಮಾಡಲಾಗಿದೆ. ಪ್ರತಿಯೊಂದನ್ನು ವಿವರವಾಗಿ ಬರೆದಿಡಲಾಗಿದೆ.ಇದನ್ನು ಮೀರಿಯೂ ಕೆಲ ಭಕ್ತರು ಕೆಜಿ, ನಾಲ್ಕಾರು ಕೆಜಿಯನ್ನು ನೇರವಾಗಿ ನೀಡಿದ್ದು ಮಾತ್ರ ಲೆಕ್ಕಕ್ಕೆ ಇಲ್ಲ.ಉಳಿದಂತೆ ಹತ್ತಾರು ಕೆಜಿಯಿಂದ ಹಿಡಿದು ಕ್ವಿಂಟಲ್ ಗಟ್ಟಲೇ ಕೊಟ್ಟಿದ್ದೆಲ್ಲವನ್ನು ಲೆಕ್ಕ ಹಾಕಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.