ಹಾನಗಲ್ಲ: ಅನಾದಿ ಕಾಲದಿಂದಲೂ ಮಾನವ ಪ್ರಕೃತಿಯ ಮೇಲೆ ಇಟ್ಟಿರುವ ಅಪಾರವಾದ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮಾಡಿ ಪಾರಂಪರಿಕ ಅನುಭವ ಹಾಗೂ ಹಿಂದಿನ ಸಂಪ್ರದಾಯ ಪಾಲಿಸಿ ಆರೋಗ್ಯ ಪೂರ್ಣ ಜೀವನ ನಡೆಸಲು ಪಂಚವಟಿವನ(ಆಕ್ಸಿಜನ್ ಟವರ್) ನಿರ್ಮಾಣಕ್ಕೆ ನಮ್ಮ ಸಂಸ್ಥೆ ಮುಂದಾಗಿದೆ ಎಂದು ವರದಶ್ರೀ ಫೌಂಡೇಶನ್ ಜ್ಞಾನ ಸಂಸತ್ತಿನ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ತಿಳಿಸಿದರು.
ಐದು ಪವಿತ್ರ ಜನಹಿತಕಾರಿ ಹಾಗೂ ಪರಿಸರಮಾಲಿನ್ಯ ನಿವಾರಣೆ ಮಾಡುವಲ್ಲಿ ಶ್ರೇಷ್ಠ ಗುಣವುಳ್ಳ ಗಿಡಗಳ ಗುಂಪು. ಗಿಡಮರಗಳಿಂದ ಸೃಷ್ಟಿ ಸೌಂದರ್ಯ ಹೊಂದಿದ ಪರಿಶುದ್ಧ ಪರಿಸರ ನೀಡುವ ಸ್ಥಳಗಳಿಗೆ ಪಂಚವಟಿ ಎಂದು ಕರೆಯುವರು. ಪರಿಸರಮಾಲಿನ್ಯದಿಂದ ಗಾಳಿ, ನೀರು, ಮಣ್ಣು, ಆಹಾರ ವಿಷಪೂರಿತವಾಗಿವೆ ಎಂದರು.
ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಕುಲಕ್ಕೆ ಆಮ್ಲಜನಕ ನೀಡುವ ಪಂಚವಟಿ ವನ ನಿರ್ಮಾಣಕ್ಕೆ ಮುಂದಾಗಿರುವ ವರದಶ್ರೀ ಫೌಂಡೇಶನ್ ಕಾರ್ಯ ಶ್ಲಾಘನೀಯ. ಈಗಾಗಲೇ 56 ಸಾವಿರ ಕಡೆ ಪಂಚವಟಿ ವನ ನಿರ್ಮಿಸುವ ಮೂಲಕ ಪರಿಸರಮಾಲಿನ್ಯ ತಡೆಗಟ್ಟುವುದರ ಜತೆಗೆ ಮನುಕುಲದ ಆರೋಗ್ಯಕ್ಕೆ ಒತ್ತು ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಎ.ಎಸ್. ಬಳ್ಳಾರಿ, ಕೆ.ಎಲ್. ದೇಶಪಾಂಡೆ, ಸಿ. ಮಂಜುನಾಥ, ರಾಜಶೇಖರ ಸಿಂಧೂರ, ಶಿವಕುಮಾರ ದೇಶಮುಖ, ನೀಲಮ್ಮ ಉದಾಸಿ, ನಾಗರತ್ನಾ ಶೇಠ, ಸಂಘಟಕ ಜಗದೀಶ ಕೊಂಡೋಜಿ, ಕುಮಾರ ಹತ್ತಿಕಾಳ, ಅಶೋಕ ಕಮಾಟಿ, ರಮೇಶ ಹಳೇಕೋಟಿ, ವಿಜಯ ಕುಬಸದ, ಅರುಣ ನಾಗಜ್ಜನವರ, ವಿರುಪಾಕ್ಷಪ್ಪ ಕಡಬಗೇರಿ, ರವಿ ಲಕ್ಷ್ಮೇಶ್ವರ, ಪ್ರಕಾಶ ಜಂಗಳಿ, ಲಕ್ಷ್ಮಣ ಬ್ಯಾಹಟ್ಟಿ ಮೊದಲಾದವರು ಉಪಸ್ಥಿತರಿದ್ದರು.