ಸಾವಿರ ಗಿಡ ನೆಡುವ ಅಭಿಯಾನ
ಗಿಡ ಮರಗಳು ಇಲ್ಲದ ಕಡೆಗಳಲ್ಲಿ ಅನೇಕ ಪ್ರಕೃತಿ ವಿಕೋಪಗಳಾಗುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ 51 ಡಿಗ್ರಿ ಉಷ್ಣಾಂಶ ಇದೆ. ಮುಂದೆ ಇದೇ ರೀತಿ ಇಲ್ಲೂ ಆಗಬಹುದು. ಆದ್ದರಿಂದ ಸಸಿಗಳನ್ನು ನೆಟ್ಟು, ಪೋಷಿಸಿ, ಮರವಾಗಿ ಬೆಳೆಸುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ 2024/25 ನೇ ಸಾಲಿನಲ್ಲಿ ಸಾವಿರ ಗಿಡ ನೆಡುವ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ‘ಪರಿಸರ ದಿನ ಸಸಿ ನೆಟ್ಟು ಸುಮ್ಮನಾಗಬಾರದು. ಒಬ್ಬೊಬ್ಬರು ಒಂದೊಂದು ಸಸಿನೆಟ್ಟು ಮರವನ್ನಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಗಿಡ ಮರಗಳು ನಮ್ಮ ಜೀವನಕ್ಕೆ ಅವಶ್ಯವಾದ ಆಮ್ಲಜನಕ ನೀಡುತ್ತದೆ. ಆಮ್ಲಜನಕ ಇಲ್ಲದಿದ್ದರೆ ನಾವು ಬದುಕಲು ಸಾಧ್ಯವೇ ಆಗುವುದಿಲ್ಲ, ಆದ್ದರಿಂದ ಸಸಿಗಳನ್ನು ನೆಟ್ಟು ಬೆಳೆಸಿ’ ಎಂದು ಸಲಹೆ ನೀಡಿದರು.ಎನ್.ಎಸ್.ಎಸ್ ಅಧಿಕಾರಿ ಫಕೀರಮ್ಮ ಮುರುಗೋಡು ಮಾತನಾಡಿ, ‘ನಾವು ನಮ್ಮ ಸುತ್ತಲ ಪರಿಸರವನ್ನು ಹಾಳು ಮಾಡುತ್ತಿದ್ದೇವೆ, ಪರಿಸರ ಕಾಪಾಡಿಕೊಳ್ಳಬೇಕು. ಪರಿಸರದಲ್ಲಿ ಪ್ರತಿದಿನ ನಮ್ಮ ವಾಹನಗಳ ವಿಷಾನಿಲ ಸೇರುತ್ತಿದೆ. ಗಿಡಮರಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕ ನೀಡುತ್ತದೆ. ಆದ್ದದಿಂದ ಗಿಡಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಪ್ರತಿಜ್ಞೆ ಮಾಡಿದರು.
ಪುರಸಭೆ ಆರೋಗ್ಯಾಧಿಕಾರಿ ವಸಂತ್, ಪ್ರಾಧ್ಯಾಪಕರಾದ ಶ್ವೇತಾ ನಾಯಕ್, ಜಯಚಂದ್ರ, ಅಶೋಕ್, ಗಣೇಶ್, ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಸಂತೋಷ್ ಕುಮಾರ್ ಭಾಗವಹಿಸಿದ್ದರು.