ಅಳಿವಿನಂಚಿನಲ್ಲಿರುವ ಜೀವ ಸಂಕುಲ ರಕ್ಷಿಸಲು ಪರಿಸರ ಸಂರಕ್ಷಣೆ ಮಾಡಿ: ಡಾ.ಎಚ್.ಎಸ್ .ವಾದಿರಾಜ್

KannadaprabhaNewsNetwork | Published : Jun 6, 2024 12:30 AM

ಸಾರಾಂಶ

ಪರಿಸರ ಉಳಿದರೆ ಮಾತ್ರ ಜೀವ ಸಂಕುಲಗಳು ಉಳಿಯುತ್ತವೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಮನುಷ್ಯನೂ ಸಹ ನಿಸರ್ಗದ ಜೊತೆ ಸಾಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾಗಿದೆ. ಆದರೆ, ಮನುಷ್ಯ ತನ್ನ ಸ್ವಾರ್ಥ ಬದುಕಿಗಾಗಿ ಇಂದು ಪರಿಸರ ನಾಶಮಾಡುತ್ತಿದ್ದಾನೆ. ಇದರಿಂದ ದಿನ ಕಳೆದಂತೆ ಜೀವಸಂಕುಲಗಳ ನಾಶ ಹೆಚ್ಚುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಅಳಿವಿನಂಚಿನಲ್ಲಿರುವ ಜೀವ ಸಂಕುಲಗಳನ್ನು ರಕ್ಷಿಸಿ ಉಳಿಸಬೇಕಾದರೆ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಹೊಣೆ ನಮ್ಮದಾಗಬೇಕು ಎಂದು ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನ ಆಸ್ಪತ್ರೆ ಸಂಶೋಧನಾ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್ ಹೇಳಿದರು.

ತಾಲೂಕಿನ ಶೀರಪಟ್ಟಣ (ಎಂ.ಹೊಸೂರು ಗೇಟ್) ಬಳಿಯಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ಆವರಣದಲ್ಲಿ ಬುಧವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ 150ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಉಳಿದರೆ ಮಾತ್ರ ಜೀವ ಸಂಕುಲಗಳು ಉಳಿಯುತ್ತವೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಮನುಷ್ಯನೂ ಸಹ ನಿಸರ್ಗದ ಜೊತೆ ಸಾಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾಗಿದೆ. ಆದರೆ, ಮನುಷ್ಯ ತನ್ನ ಸ್ವಾರ್ಥ ಬದುಕಿಗಾಗಿ ಇಂದು ಪರಿಸರ ನಾಶಮಾಡುತ್ತಿದ್ದಾನೆ. ಇದರಿಂದ ದಿನ ಕಳೆದಂತೆ ಜೀವಸಂಕುಲಗಳ ನಾಶ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರದಲ್ಲಿ ನಾವೂ ಕೂಡ ಒಂದು ಜೀವಸಂಕುಲ ಎನ್ನುವುದನ್ನೆ ಮರೆತುಬಿಟ್ಟಿದ್ದೇವೆ. ಪ್ರಕೃತಿಯ ನಿಯಮಗಳನ್ನು ಪಾಲಿಸಿದ್ದರೆ ಬರಗಾಲ, ಹವಾಮಾನ ವೈಪರಿತ್ಯ, ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಎದುರಾಗುತ್ತಿರಲಿಲ್ಲ ಎಂದರು.

ಆಧುನಿಕ ಜೀವನ ಶೈಲಿಯಿಂದಾಗಿ ಅನೇಕ ಆರೋಗ್ಯ ಸಮಸ್ಯೆ ಉದ್ಭವಿಸುತ್ತವೆ. ಮಾತ್ರೆಯಿಂದ ಗುಣಪಡಿಸಲಾಗದಂತಹ ಕಾಯಿಲೆಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೆ ಈ ಚಿಕಿತ್ಸಾಲಯದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ ಎಂದರು.

ಇದಕ್ಕೆ ಪೂರಕವಾಗಿ ಸಿಬ್ಬಂದಿ ಸ್ವ-ಇಚ್ಚೆ ಮತ್ತು ಸಹಕಾರದೊಂದಿಗೆ ಸಂಸ್ಥೆಯ ಪರಿಸರದಲ್ಲಿ ವೃಕ್ಷಾ ರೋಪನ ಕಾರ್ಯಕ್ರಮದ ಮೂಲಕ ವಿವಿಧ ಬಗೆಯ ಹೂವು, ಹಣ್ಣುಗಳ 150ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗುತ್ತಿದೆ. ನೆಟ್ಟಿರುವ ಎಲ್ಲಾ ಗಿಡಗಳನ್ನು ಕನಿಷ್ಠ ಎರಡು ವರ್ಷ ಕಾಲ ಪೋಷಣೆ ಮಾಡಿ ಸುಂದರ ಪರಿಸರ ನಿರ್ಮಿಸಬೇಕು ಎಂದರು.

ಸಮಾರಂಭದಲ್ಲಿ ಆಸ್ಪತ್ರೆ ವೈದ್ಯರಾದ ಡಾ.ನಿತೇಶ್, ಡಾ.ನುಸಾತ್, ಡಾ.ಸಿಂಧೂಶ್ರೀ, ಡಾ.ಪೂಜಾ, ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಭೌತಚಿಕಿತ್ಸಕಿ ರಮ್ಯ, ಎಂಜಿನಿಯರ್ ನಾಗೇಶ್, ಕಚೇರಿ ಸಹಾಯಕರಾದ ಚೈತ್ರ, ಎಂ.ಪ್ರಗತಿ, ಟಿ.ಎ. ಶಿವರಾಜ್, ಯಶ್ವಂತ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಇದ್ದರು.

Share this article